ಲಕ್ಷ್ಮೇಶ್ವರ: ಬೇಸಿಗೆ ಬಂತೆಂದರೆ ಸಾಕು, ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ. ಬಾಯಾರಿದೊಡನೆ ಜನರು ನೀರಿಗಾಗಿ ಹಾತೊರೆಯುತ್ತಾರೆ. ಎಲ್ಲೂ ನೀರು ಸಿಗದಿದ್ದರೆ ದುಡ್ಡುಕೊಟ್ಟು ಖರೀದಿಸಿಯಾದರೂ ದಾಹ ದೂರ ಮಾಡಿಕೊಳ್ಳುತ್ತಾರೆ. ಆದರೆ, ಮೂಕ ವನ್ಯಜೀವಿಗಳೇನು ಮಾಡಬೇಕು. ಜನರಿಗೆ ಸಿಗುವಷ್ಟು ಸುಲಭವಾಗಿ ವನ್ಯಜೀವಿಗಳಿಗೆ ಈ ಕಾಡಿನಲ್ಲಿ ನೀರು ಲಭಿಸುವುದಿಲ್ಲ. ನೀರಿನ ಅಭಾವದಿಂದ ಅವು ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ
ಗದಗ ಜಿಲ್ಲೆಯು ವೈವಿಧ್ಯಮಯ ಪಕ್ಷಿಗಳ ತಾಣವಾಗುವ ಸ್ಥಾನವೂ ಹೌದು.ಈ ಜಿಲ್ಲೆಯಲ್ಲಿರುವ ಪರಿಸರ ವ್ಯವಸ್ಥೆ ಈಗಲೂ ಹಲವಾರು ಜೀವಿಗಳಿಗೆ ನೆಲೆ ಕಲ್ಪಿಸಿದೆ. ಚಳಿಗಾಲ ಹಾಗೂ ಮಳೆಗಾಲಕ್ಕೆ ಹೋಲಿಸಿದರೆ, ಜಿಲ್ಲೆಯಲ್ಲಿ ಬೇಸಿಗೆಯಲ್ಲೇ ವನ್ಯಜೀವಿಗಳು ಹೆಚ್ಚು ಅಪಾಯಕ್ಕೆ ಸಿಲುಕುತ್ತವೆ.ಈ ರೀತಿ ಸಂಕಷ್ಟ ಎದುರಿಸುವ ಜೀವಿಗಳಲ್ಲಿ ಪಕ್ಷಿಗಳೇ ಹೆಚ್ಚು.

ಬೇಸಿಗೆಯಲ್ಲಿ ಪಕ್ಷಿಗಳು ಬಹುಬೇಗನೆ ದಾಹದಿಂದ ಪರಿತಪಿಸುತ್ತವೆ. ಅವುಗಳ ಬಾಯಾರಿಕೆ ನೀಗುವಂತಹ ಶುದ್ಧ ನೀರು ಈ ಜಿಲ್ಲೆಯಲ್ಲಿ ಮರೀಚಿಕೆಯಾಗಿದೆ. ಇರುವ ಜಲಮೂಲಗಳೆಲ್ಲ ಹಳ್ಳಕೊಳ್ಳಗಳೆಲ್ಲ ಬತ್ತಿ ಹೊಗಿ ಕುಡಿಯುವ ನೀರಿಗಾಗಿ ಪಕ್ಷಿಗಳು ವಿವಿಧ ಸಮಸ್ಯೆಯಿಂದ ಪ್ರಾಣ ಬಿಡುತ್ತಿವೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ವನ್ಯಜೀವಿ ಸಂರಕ್ಷಕರು.
ಗುಬ್ಬಿ ಕ್ಷೀಣಿಸಲು ಪಾರಿವಾಳ ಕಾರಣ:
ಗುಬ್ಬಚ್ಚಿ ಸಂಖ್ಯೆ ಕ್ಷೀಣಿಸಲು ಮೊಬೈಲ್ ವಿಕಿರಣಗಳು ಕಾರಣ ಎಂದು ಹೇಳಲಾಗುತ್ತಿದೆ. ಇದು, ವೈಜ್ಞಾನಿಕವಾಗಿ ಇನ್ನೂ ದೃಢವಾಗಿಲ್ಲ. ಪಕ್ಷಿಗಳೂ ಸಂಘರ್ಷಕ್ಕೆ ಒಳಪಡುತ್ತವೆ. ಗುಬ್ಬಿ ಸಂತತಿ ಕಡಿಮೆಯಾಗಲು ಪಾರಿವಾಳಗಳು ಪರೋಕ್ಷ ಕಾರಣ’ ಎನ್ನುತ್ತಾರೆ ಮಾಂತೇಶ ಎಲ್.
‘ಗುಬ್ಬಚ್ಚಿ ಹೆಚ್ಚಾಗಿ ಮನೆಗಳಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಪಾರಿವಾಳಗಳನ್ನು ಸಾಕುವ ಪ್ರವೃತ್ತಿ ಹೆಚ್ಚಾಗಿದೆ. ಪಾರಿವಾಳಗಳು ಬೇರೆ ಪಕ್ಷಿಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ, ಗುಬ್ಬಿಯ ಮೇಲೆ ಪಾರಿವಾಳದ ದಾಳಿ ಹೆಚ್ಚು. ಈ ಕಾರಣದಿಂದಲೂ ಗುಬ್ಬಿ ಸಂತತಿ ಕಡಿಮೆಯಾಗಿದೆ’ ಎಂದು ಮಾಹಿತಿ ನೀಡಿದರು.
ಅಭಿವೃದ್ಧಿಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಗದಗ ಜಿಲ್ಲೆನಲ್ಲಿ ವನ್ಯಜೀವಿಗಳ ಆವಾಸ ಸ್ಥಳಗಳೆಲ್ಲ ಅಕ್ರಮ ಗಣಿಗಾರಿಕೆ ಅತಿಕ್ರಮಣವಾಗಿವೆ. ಇದರಿಂದ ಸಹಜವಾಗಿ ಜೀವಿಗಳು ಹೊಸ ಸ್ಥಳವನ್ನಾಶ್ರಯಿಸಿ ಹೊರ ಬರುತ್ತವೆ. ಅಂತಹ ಜೀವಿಗಳ ಮೇಲೆ ದಾಳಿ ನಡೆಯುತ್ತಿವೆ. ಅವುಗಳ ಜೀವಿಸುವ ಹಕ್ಕನ್ನು ಮಾನವ ದರ್ಪದಿಂದ ಕಸಿಯುತ್ತಿದ್ದಾನೆ’ಎಂದು ವನ್ಯಜೀವಿ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಕೋಟ್:
ಬೇಸಿಗೆಯಲ್ಲಿ ವನ್ಯಜೀವಿಗಳು ಅಪಾಯಕ್ಕೆ ಸಿಲುಕುತ್ತವೆ. ಈ ಬಗ್ಗೆ ನಾಗರಿಕರು ಸಹಾಯವಾಣಿಗಳಿಗೆ ಕೂಡಲೇ ಮಾಹಿತಿ ನೀಡುವುದರಿಂದ ವನ್ಯಜೀವಿಗಳನ್ನು ಸಂರಕ್ಷಿಸಬಹುದು.
– ಮಾಂತೇಶ ಎಸ್, ಅರಣ್ಯಾಧಿಕಾರಿಗಳು.
ದೈನಂದಿನ ಬಳಕೆಗೆ ನೀರನ್ನು ಅತಿಯಾಗಿ ಪೋಲು ಮಾಡುತ್ತೇವೆ. ಅದರ ಒಂದು ಭಾಗವನ್ನು ಪ್ರಾಣಿ–ಪಕ್ಷಿಗಳಿಗೆ ನೀಡುವುದರಿಂದ ಜೀವದಾನ ಮಾಡಬಹುದು.
–ರಮೇಶ ಎಸ್ ಎಲ್..ಪಕ್ಷಿ ಪ್ರೇಮಿ