ನರೇಗಲ್ಲ; ಸರ್ಕಾರಿ ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸಲು ಹಾಗೂ ಕನ್ನಡ ಶಾಲೆಗಳನ್ನು ಹೆಚ್ಚು ಸೌಕರ್ಯ, ಸೌಲಭ್ಯಗಳೊಂದಿಗೆ ಆಕರ್ಷಿಸಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯ ಎಂದು ರೋಣ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್. ಹುರಳಿ ಹೇಳಿದರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಸಮೀಪದ ನಿಡಗುಂದಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಗೆ ಬೆಂಗಳೂರಿನ ಇಂಜಿನಿಯರ್ ಸಂಗಮೇಶ ಕಡ್ಡಿ ನಲಿ-ಕಲಿ ತರಗತಿಗೆ ೪೦ ಚೇರ್, ೫ ರೌಂಡ್ ಸ್ಟಡಿ ಟೇಬಲ್ ಸೇರಿದಂತೆ ೩೦,೦೦೦ ರೂ.ಗಳ ಪೀಠೋಪಕರಣಗಳ ದೇಣಿಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ಈ ಹಿಂದಿಗಿಂತಲೂ ಈಗ ಸಾಕಷ್ಟು ಸೌಲಭ್ಯಗಳನ್ನು ಹೊಂದಿವೆ. ಇನ್ನಷ್ಟು ಅಭಿವೃದ್ಧಿ ಹೊಂದಲು ಸಾರ್ವಜನಿಕರು ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡುವ ಮೂಲಕ ಸಹಕರಿಸಬೇಕು. ಸರ್ಕಾರಿ ಶಾಲೆಗಳು ಅತ್ಯತ್ತಮ ಶಿಕ್ಷಕರನ್ನು ಹೊಂದಿದ್ದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ದ್ರಾಕ್ಷಾಯಿಣಿ ಗೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಎಲ್.ಎನ್. ಕಳಕಣ್ಣವರ, ಉಪಾಧ್ಯಕ್ಷ ಮಹೇಶ ಕಮ್ಮಾರ, ಸಾವಿತ್ರಿ ಕರಡಿ ಸೇರಿದಂತೆ ಇತರರಿದ್ದರು. ಎಂ.ಬಿ. ದೊಡ್ಡಮನಿ, ಪೂರ್ಣಿಮಾ ಶೇಬಗೊಂಡ, ಶ್ವೇತಾ ಕೋಟಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.