ಗದಗ : ಭಾರತದ ಭವ್ಯ ಭವಿಷ್ಯದ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳು ತಮ್ಮಲ್ಲಿರುವ ಸೃಜನಶೀಲತೆಯನ್ನು ಅನಾವರಣಗೊಳಿಸುವ ಈ ಯುವ ಜನೋತ್ಸವ ಒಂದು ಚೇತೋಹಾರಿ ಕಾರ್ಯಕ್ರಮವಾಗಲಿ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ, ನೆಹರು ಯುವ ಕೇಂದ್ರ, ಗದಗ, ಯುವ ಸಂಘಗಳ ಒಕ್ಕೂಟ, ಗದಗ ಲಾಯನ್ಸ್ ಶಿಕ್ಷಣ ಸಂಸ್ಥೆ, ಗದಗ, ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ, ಗದಗ ಇವರುಗಳ ಸಹಯೋಗದಲ್ಲಿ ಜರುಗಿದ ೨೦೨೪-೨೫ ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಎಸ್. ವಿ. ಸಂಕನೂರ ಮಾತನಾಡಿ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ ಮುಂತಾದ ರಂಗಗಳಲ್ಲಿ ಗದುಗಿನ ಪ್ರತಿಭೆಗಳು ಮಿಂಚಿದ್ದು ನಮಗೆಲ್ಲಾ ಹೆಮ್ಮೆಯ ಸಂಗತಿ. ಭಾರತ ರತ್ನ ಪ್ರಶಸ್ತಿ ಪಡೆದ ಪಂ. ಭೀಮಸೇನ ಜೋಶಿಯವರು ಸಂಗೀತಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಅಭಿಪ್ರಾಯಪಟ್ಟರು.ಇಂದಿನ ಈ ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಸ್ಪರ್ಧಾಳುಗಳು ಉತ್ತಮ ಯಶಸ್ಸು ಪಡೆದು ವಿಭಾಗ, ರಾಜ್ಯ, ಹಾಗೇ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು. ಭಾರತೀಯ ಕಲೆಗಳತ್ತ ವಿದ್ಯಾರ್ಥಿಗಳು ಗಮನ ಹರಿಸಲಿ ಎಂದರು.
ಯುವ ಸಂಘಗಳ ಒಕ್ಕೂಟ, ಗದಗ ದ ಜಿಲ್ಲಾಧ್ಯಕ್ಷರಾದ ಶ್ರೀ. ರವಿಕಾಂತ ಅಂಗಡಿಯವರು ಯುವಜನೋತ್ಸವ ಜರುಗಿಸಲು ಆವರಣ ನೀಡಿದ ಸನ್ಮಾರ್ಗ ಕಾಲೇಜಿನ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ ಹಾಗೂ ಇತರ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸುತ್ತಾ ಈ ಉತ್ಸವ ವಿದ್ಯಾರ್ಥಿಗಳಲ್ಲಿ ಉತ್ಸಾಹ, ಪ್ರೇರಣೆ, ಯಶಸ್ಸು ತರಲಿ ಎಂದರಲ್ಲದೆ, ಇಂತಹ ಸಾಂಸ್ಕೃತಿಕ ಸ್ಪರ್ಧಾಕೂಟಕ್ಕೆ ಸರ್ಕಾರ ಹೆಚ್ಚು ಅನುದಾನ ನೀಡಲಿ ಎಂದು ಕೇಳಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಟೂಡೆಂಟ್ಸ್ ಎಜುಕೇಶನ್ ಸಂಸ್ಥೆಯ ಚೇರಮನ್ನರಾದ ಪ್ರೊ. ರಾಜೇಶ ಕುಲಕರ್ಣಿಯವರು ಯುವಜನೋತ್ಸವವನ್ನು ಜರುಗಿಸಲು ನಮ್ಮ ಕಾಲೇಜನ್ನು ಆಯ್ಕೆ ಮಾಡಿದ್ದಕ್ಕಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ. ಶರಣು ಗೋಗೇರಿ, ಹಾಗೂ, ನೆಹರು ಯುವ ಕೇಂದ್ರ, ಗದಗ ದ ಜಿಲ್ಲಾ ಯುವ ಅಧಿಕಾರಿಗಳಾದ ಶ್ರೀಮತಿ ರಂಜನಿ ಮೇಡಂ ಹಾಗೂ ಅವರ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ತಿಳಿಸಿ, ಈ ಉತ್ಸವದಲ್ಲಿ ಅತ್ಯಂತ ಸ್ಪರ್ಧಾಮನೋಭಾವದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಲಿ ಎಂದರು.
ಪ್ರಾರಂಭದಲ್ಲಿ ನಾಡಗೀತೆಯೊಂದಿಗೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಶರಣು ಗೋಗೇರಿ ಸರ್ವರನ್ನು ಸ್ವಾಗತಿಸಿದರು. ಆಗಮಿಸಿದ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಪ್ರೊ. ರಾಜೇಶ ಕುಲಕರ್ಣಿ, ಪ್ರೊ. ಪ್ರೇಮಾನಂದ ರೋಣದ ಹಾಗೂ ಆಡಳಿತ ಮಂಡಳಿಯ ಸರ್ವ ಪದಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಸನ್ಮಾನಿಸಿದರು. ಕೊನೆಯಲ್ಲಿ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಸರ್ವರನ್ನು ವಂದಿಸಿದರು. ಪ್ರೊ. ಬಾಹುಬಲಿ ನಿರೂಪಿಸಿದರು.