ಗದಗ:ಬ್ಯಾಂಕ್ ಉದ್ಯೋಗಿಯೊಬ್ಬರು ಡಿಜಿಟಲ್ ಅರೆಸ್ಟ್ ಗೆ ಬಲಿಯಾಗಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಹಣವನ್ನ ಕಳೆದುಕೊಂಡಿರೋ ಘಟನೆ ಗದಗ ಬೆಟಗೇರಿಯಲ್ಲಿ ನಡೆದಿದೆ.
ಈಗಾಗಲೇ ಡಿಜಿಟಲ್ ಅರೆಸ್ಟ್ ಕುರಿತು ಪೊಲೀಸ್ ಇಲಾಖೆ ಹಾಗೂ ಸೈಬರ್ ಕ್ರೈಂ ಇಲಾಖೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿವೆ. ಅಷ್ಟಾದರೂ ಬ್ಯಾಂಕ್ ಸಿಬ್ಬಂದಿಯೇ ಇಲ್ಲಿ ಸೈಬರ್ ವಂಚಕರಿಗೆ ಬಲಿಯಾಗಿದ್ದಾರೆ.
2024 ರ ಅಕ್ಟೋಬರ್ 10 ರಂದು ಈ ಘಟನೆ ನಡೆದಿದ್ದು ಗದಗನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳಾ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ, ಅನ್ಯ ಸಂಖ್ಯೆಯಿಂದ ವಾಟ್ಸಪ್ ಮೆಸೆಜ್ ಒಂದು ಬಂದಿದೆ. ನಾವು ನಿಮಗೆ ಟಾಸ್ಕ್ ಕೊಡುತ್ತೇವೆ. ಅದರಲ್ಲಿ ಲಾಡ್ಜ್ ಬಗ್ಗೆ ರಿವಿವ್ ಕೊಟ್ಟರೆ 1 ಟಾಸ್ಕಗೆ 100/- ರೂ.ನಂತೆ ನಿಮಗೆ ಕಮಿಷನ್ ಬರುತ್ತದೆ ಎಂದು ಹೇಳಿದ್ದಾರೆ.
ಇದನ್ನು ಮುಂದುವರೆಸಲು ನಿಮ್ಮ ಹೆಸರು ವಿಳಾಸ ಹಾಗೂ ಯುಪಿಐ ಮಾಹಿತಿ ಕಳುಹಿಸಲು ಹೇಳಿ ಬ್ಯಾಂಕ್ ಉದ್ಯೋಗಿಯಿಂದ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ.
ಮೊದ ಮೊದಲು ₹1000/- ರೂ.ಗಳ ಲಾಭಾಂಶ ಬರುವಂತೆ ಮಾಡಿದ್ದಾರೆ.ನಂತರ ವಿವಿಧ ಟಾಸ್ಕಗಳನ್ನ ಕೊಟ್ಟು ಕಂಪ್ಲಿಟ್ ಮಾಡಲು ಹೇಳಿದ್ದಾರೆ. ವಂಚಕರು ಕೊಟ್ಟ ಟಾಸ್ಕಗಳನ್ನು ಕಂಪ್ಲಿಟ್ ಮಾಡಿದ ಬ್ಯಾಂಕ್ ಸಿಬ್ಬಂದಿ, ನಂತರ ಹಣವನ್ನು ವಿತ್ಡ್ರಾಲ್ ಮಾಡಲು ಹೋಗಿದ್ದಾರೆ. ಆಗ ಟಾಸ್ಕ್ ಹಣ ನೀಡಲು ವಿವಿಧ ಕಾರಣಗಳನ್ನು ನೀಡಿದ, ನಯವಂಚಕರು ಬ್ಯಾಂಕ್ ಸಿಬ್ಬಂದಿಯಿಂದ ಹಂತ ಹಂತವಾಗಿ ಬರೊಬ್ಬರಿ, 25,65,000/- ರೂ.ಗಳನ್ನು ಹಾಕಿಸಿಕೊಂಡಿದ್ದಾರೆ.
ನಂತರ ಯಾವ ಟಾಸ್ಕ ಹಣವೂ ಇಲ್ಲದೇ, ಇತ್ತ ತಮ್ಮ ಅಕೌಂಟ್ ನಲ್ಲಿದ್ದ ಹಣವನ್ನೂ ಕಳೆದುಕೊಂಡ ಸಿಬ್ಬಂದಿ, ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ವಂಚಕರಿಗಾಗಿ ಬಲೆ ಬೀಸಿದ್ದಾರೆ.
ಡಿಜಿಟಲ್ ಅರೆಸ್ಟ್ ಗೆ ವಿದ್ಯಾವಂತರೇ ಬಲಿಯಾಗುತ್ತಿದ್ದು, ಇನ್ನಾದರೂ ಸಾರ್ವಜನಿಕರು ಸೈಬರ್ ಕ್ರೈಂ ಖದೀಮರಿಂದ ಎಚ್ಚರಗೊಳ್ಳಬೇಕಿದೆ.