ಗದಗ: ಧರ್ಮಸ್ಥಳದ ಅಪಪ್ರಚಾರ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಮಾಜಿ ಸಚಿವ ಸಿಟಿ ರವಿ ಗದಗನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ದೂರುದಾರನ ಜೊತೆಗೆ ಸಮೀರ್, ಮಟ್ಟಣ್ಣವರ್, ತಿಮರೋಡಿ ಅವರ ಮೇಲೂ ಮಂಪರು ಪರೀಕ್ಷೆ ನಡೆಸಬೇಕೆಂದು ನಾನು ಒತ್ತಾಯಿಸಿದ್ದೆ. ಆದಾಗ್ಯೂ ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸಿ ಜನರಲ್ಲಿ ಕುತೂಹಲ ಮೂಡಿಸುವ ಪ್ರಯತ್ನ ನಡೆದಿದೆ. ಯಾರದಾದರೂ ವ್ಯಕ್ತಿಯ ಮೇಲೆ ಹೀಗೆ ಅಪಪ್ರಚಾರ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸೌಜನ್ಯ ಕೊಲೆ ಪ್ರಕರಣದ ವಿಚಾರವನ್ನು ಉಲ್ಲೇಖಿಸಿದ ಅವರು, “ಅಂದು ನಮ್ಮ ಸರ್ಕಾರದಲ್ಲಿ ಓರ್ವ ಕೊಲೆಗಾರರನ್ನು ಬಂಧಿಸಲಾಗಿತ್ತು. ಆದ್ದರಿಂದ ಇಂದಿನ ಅಪಪ್ರಚಾರಗಳ ಹಿಂದೆ ಇರುವ ನೆಟ್ವರ್ಕ್ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು” ಎಂದರು. ತಿರುಪತಿ, ಶಬರಿಮಲೈ ನಂತರ ಈಗ ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆಯುತ್ತಿದೆ. ಇದಕ್ಕೆ ಮತಾಂತರ ಶಕ್ತಿಗಳು, ಕೆಲವು ಎಡಪಂಥೀಯ ಸಂಘಟನೆಗಳು ಮತ್ತು ಎಸ್‌ಡಿಪಿಐ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಈ ಕುರಿತು ಹಾಲಿ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಅವರು ಒತ್ತಾಯಿಸಿದರು.
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ ಅವರು, “ಚಾಮುಂಡಿಯ ಮೇಲೆ ನಂಬಿಕೆ ಇದ್ದರೆ ಉದ್ಘಾಟನೆ ಮಾಡಲಿ. ಈ ವಿಷಯದಲ್ಲಿ ನಾನು ಏನೂ ಕಾಮೆಂಟ್ ಮಾಡಲಾರೆ. ದೇವರಲ್ಲಿ ಹಲವಾರು ನಾಮಗಳಿವೆ ಎಂಬ ದರ್ಶನವನ್ನು ಭಾರತೀಯರು ಕೊಟ್ಟಿದ್ದಾರೆ. ಆದರೆ ಇಸ್ಲಾಂನಲ್ಲಿ ಅಲ್ಲಾ ಮಾತ್ರ ದೇವರು ಎಂದು ಹೇಳಲಾಗುತ್ತದೆ. ಬಾನು ಅವರಿಗೆ ನಂಬಿಕೆ ಇದ್ದಲ್ಲಿ ಅವರು ಉದ್ಘಾಟನೆ ಮಾಡಬಹುದು” ಎಂದು ಅಭಿಪ್ರಾಯಪಟ್ಟರು.
ಗಣೇಶೋತ್ಸವದ ಸಂದರ್ಭದಲ್ಲಿ ಡಿಜೆ ಹಾಗೂ ಪಟಾಕಿ ನಿಷೇಧಿಸಿದ ಸರ್ಕಾರಿ ಸರ್ಕ್ಯುಲರ್ ಬಗ್ಗೆ ಮಾತನಾಡಿದ ಅವರು, “ಹಿಂದೂ ಹಬ್ಬಗಳ ಮೇಲೆಯೇ ಸರ್ಕಾರ ಕಣ್ಣು ಹಾಕುತ್ತಿದೆ. ಗಣೇಶ ಹಬ್ಬದಂದೇ ನಿಯಮ ಹೇರಲಾಗುತ್ತಿದೆ. ಯಾವುದೇ ಊರಲ್ಲಿ ಸಮಸ್ಯೆ ಇದ್ದರೆ ಸ್ಥಳೀಯ ಆಡಳಿತ ನೋಡಿಕೊಳ್ಳಲಿ. ಕಾನೂನು ಬಗ್ಗೆ ಶ್ರದ್ಧೆ ಇದ್ದರೆ, ಧ್ವನಿವರ್ಧಕ ಬಳಕೆ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಪಾಲಿಸಬೇಕು. ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಮಾತ್ರ ಮಿತಿಗೊಳಿಸಲಾಗಿದೆ. ಹೀಗಿರುವಾಗ ಹಿಂದೂ ಹಬ್ಬಗಳ ಮೇಲೇ ವಿಶೇಷ ನಿಷೇಧ ಏಕೆ?” ಎಂದು ಪ್ರಶ್ನಿಸಿದರು.
“ಹಿಂದೂಗಳು ಕಲ್ಲು ಹೊಡೆಯುವುದಿಲ್ಲ, ಪೆಟ್ರೋಲ್ ಬಾಂಬ್ ಹಾಕುವುದಿಲ್ಲ. ಆದರೆ ನಾಗಮಂಗಲದಲ್ಲಿ ಗಣೇಶ ಮೆರವಣಿಗೆಯಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದು ಎಸ್‌ಡಿಪಿಐ. ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ, ಹಿಂದೂಗಳ ಹಬ್ಬದ ಮೇಲೆ ಮಾತ್ರ ನಿರ್ಬಂಧ ಹೇರಿರುವುದು ತಪ್ಪು ನೀತಿ” ಎಂದು ಆರೋಪಿಸಿದರು. ಗಣೇಶೋತ್ಸವಕ್ಕೆ ಸಂಬಂಧಿಸಿದ ಸರ್ಕ್ಯುಲರ್ ಅನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಹೆಚ್.ಕೆ. ಪಾಟೀಲ್, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವಾರು ನಾಯಕರು ಹಿಂದೂಗಳೇ ಆದರೂ, ಅವರ ನೀತಿ ಹಿಂದೂ ಪರವಾಗಿಲ್ಲ ಎಂದು ಅವರು ಟೀಕಿಸಿದರು. “ನೀವು ಹಿಂದೂಗಳಲ್ಲ ಎಂದು ನಾನು ಹೇಳಲಾರೆ. ಆದರೆ ನಿಮ್ಮ ರಾಜಕೀಯಕ್ಕಾಗಿ ಸ್ವಾರ್ಥದ ನೀತಿ ಅನುಸರಿಸುತ್ತಿದ್ದೀರಿ” ಎಂದು ಮಾಜಿ ಸಚಿವ ಸಿಟಿ ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧ್ಯಕ್ಷ ರಾಜು ಕುರಡಗಿ, ಯುವ ಮುಖಂಡರಾದ ಉಮೇಶಗೌಡ ಪಾಟೀಲ, ಹಿರೇಮಠ, ಭೀಮಸಿಂಗ್ ರಾಠೋಡ ಸೇರಿದಂತೆ ಅನೇಕರು ಇದ್ದರು.