ಗದಗ, ಆ. 16: ಗದಗ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಭಕ್ತಿಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶ್ರೀಕೃಷ್ಣ ಮತ್ತು ರಾಧೆಯರ ಛದ್ಮವೇಷದಲ್ಲಿ ವಾಯ್.ಎನ್. ಚಿಕ್ಕಟ್ಟಿ ಪ್ರೀ ಸ್ಕೂಲ್ಗೆ ಕರೆದುಕೊಂಡು ಬಂದಿದ್ದರು. ಮಕ್ಕಳ ವೇಷಭೂಷಣ ಮತ್ತು ಅವರ ಮುಗ್ದ ನಗು ನೋಡಿದಾಗ ಸ್ವತಃ ಶ್ರೀಕೃಷ್ಣ–ರಾಧೆಯರೇ ಭೂಲೋಕಕ್ಕೆ ಬಂದಂತೆಯೆಂದು ಎಲ್ಲರೂ ಭಾಸಪಟ್ಟರು. ತಾಯಂದಿರು ಸಹ ಯಶೋಧೆಯ ವೇಷ ಧರಿಸಿ ಸಮಾರಂಭಕ್ಕೆ ಮೆರಗು ತಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಾಹಿತಿಗಳಾದ ಶ್ರೀ ಐ.ಕೆ. ಕಮ್ಮಾರರು ಜಾಥಾಗೆ ಚಾಲನೆ ನೀಡಿದರು. ವಿನಯ್ ಚಿಕ್ಕಟ್ಟಿ ಐ.ಸಿ.ಎಸ್.ಇ. ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ವಾದ್ಯಮೇಳ ನುಡಿಸಿ ಜಾಥಾಕ್ಕೆ ಭಕ್ತಿಭಾವ ತುಂಬಿದರು.
ಜಾಥಾವು ವಾಯ್.ಎನ್. ಚಿಕ್ಕಟ್ಟಿ ಪ್ರೀ ಸ್ಕೂಲ್, ಮಾಡಲ್ ಹೈಸ್ಕೂಲ್ ಕ್ಯಾಂಪಸ್ ಹಾಗೂ ಕೆ.ಸಿ. ರಾಣಿ ರಸ್ತೆ ಮೂಲಕ ಸಾಗುತ್ತ, ವಿನಯ್ ಚಿಕ್ಕಟ್ಟಿ ಪ್ರೀ ಸ್ಕೂಲ್ ಹಾತಲಗೇರಿ ನಾಕಾದವರೆಗೆ ನಡೆಯಿತು. ಮಾರ್ಗ ಮಧ್ಯದಲ್ಲಿ ನೆರೆದ ಜನತೆ ಮಕ್ಕಳು ಧರಿಸಿದ್ದ ಆಕರ್ಷಕ ವೇಷಭೂಷಣಗಳನ್ನು ನೋಡಿ ಮೂಕವಿಸ್ಮಿತರಾಗಿ ಕಣ್ಮನಗಳನ್ನು ಹರ್ಷದಿಂದ ತುಂಬಿಕೊಂಡರು.

ಶ್ರೀಕೃಷ್ಣನನ್ನು ವಿಷ್ಣುವಿನ ಎಂಟನೇ ಅವತಾರವೆಂದು ಪುರಾಣಗಳು ತಿಳಿಸುತ್ತವೆ. ಭೂಮಿಯ ಮೇಲಿನ ದುಷ್ಟರ ಸಂಹಾರ ಹಾಗೂ ಶಿಷ್ಟರ ಸಂರಕ್ಷಣೆಗಾಗಿ ವಿಷ್ಣುವು ಮಾನವರೂಪದಲ್ಲಿ ಶ್ರೀಕೃಷ್ಣನಾಗಿ ಜನಿಸಿದ್ದಾನೆಂಬ ನಂಬಿಕೆ ಇದೆ. ಅಷ್ಟಮಿಯ ಮಧ್ಯರಾತ್ರಿ ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಜನನದ ತಕ್ಷಣ ವಸುದೇವನು ಅವನನ್ನು ಕಂಸನ ಕೋಪದಿಂದ ರಕ್ಷಿಸಲು ಮಥುರೆಯಿಂದ ಗೋಕುಲಕ್ಕೆ ಕರೆದುಕೊಂಡು ಹೋಗಿ ನಂದನ ಮನೆಯಲ್ಲಿಟ್ಟನು. ದೇವಕಿ ಜೀವಿತ ತಾಯಿ ಆದರೂ ಯಶೋಧೆ ಸಾಕಿದ ತಾಯಿಯಾಗಿ ಪ್ರಸಿದ್ಧಳಾದಳು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್.ವಾಯ್. ಚಿಕ್ಕಟ್ಟಿ, ಉಪ ಪ್ರಾಚಾರ್ಯೆ ಶ್ರೀಮತಿ ಶೋಭಾ ಸ್ಥಾವರಮಠ, ಉಪಮುಖ್ಯೋಪಾಧ್ಯಾಯೆ ಶ್ರೀಮತಿ ರಿಯಾನಾ ಮುಲ್ಲಾ, ವಾಯ್.ಎನ್. ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಉಪಮುಖ್ಯೋಪಾಧ್ಯಾಯೆ ಶ್ರೀಮತಿ ಶೋಭಾ ಭಟ್, ವಿನಯ್ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ಉಪಮುಖ್ಯೋಪಾಧ್ಯಾಯೆ ಶ್ರೀಮತಿ ಪುಷ್ಪಲತಾ ಎಂ. ಬೆಲೇರಿ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.