ಗದಗ, ಮೇ 18: ಭಾರತದ ಮಾಜಿ ಪ್ರಧಾನಿಗಳು, ಜನತಾ ದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರೈತ ಪರ ಹೋರಾಟಗಾರರಾದ ಶ್ರೀ ಎಚ್.ಡಿ. ದೇವೇಗೌಡ ಅವರ 93ನೇ ಜನ್ಮದಿನಾಚರಣೆಯನ್ನು ಅನನ್ಯ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು. ಗದಗ ತಾಲೂಕಿನ ಬಿಂಕದಕಟ್ಟಿಯಲ್ಲಿ ಇರುವ ಮೃಗಾಲಯದಲ್ಲಿ ಪಕ್ಷಿಗಳನ್ನು ದತ್ತು ಪಡೆಯುವ ಮೂಲಕ ಜನ್ಮದಿನವನ್ನು ಸಾರ್ಥಕವಾಗಿ ಕೊಂಡಾಡಲಾಯಿತು.
ಈ ವಿಶಿಷ್ಟ ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರಾದ ವೆಂಕನಗೌಡ ಆರ್. ಗೋವಿಂದಗೌಡ್ರ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದು, ಸಮಾಜದೊಂದಿಗೆ, ಪ್ರಕೃತಿಯೊಂದಿಗೆ ತಾಳ್ಮೆಯ ನಂಟು ಕಾಪಾಡಿಕೊಳ್ಳುವ ಸಂದೇಶವನ್ನು ಈ ಮೂಲಕ ನೀಡಲಾಯಿತು. ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿದ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕನಗೌಡ ಆರ್. ಗೋವಿಂದಗೌಡ್ರ ಅವರು, “ದೇವೇಗೌಡರ ಜೀವನ ಅನೇಕರಿಗೆ ಪ್ರೇರಣೆಯಾಗಿದೆ. ಅವರ ರಾಜಕೀಯ ಛಲ, ಚಾಣಾಕ್ಷತೆ, ಸರಳತೆ ಹಾಗೂ ಸಮರ್ಥ ಆಡಳಿತದ ನೆನೆಯುವಂತಹ ಹಲವಾರು ಕಾರ್ಯಗಳು ಇಂದು ಕೂಡ ಮಾದರಿಯಾಗಿದೆ. ಪ್ರಧಾನಿಯಾಗಿ ಅವರ ಆಡಳಿತ ಅವಧಿಯಲ್ಲಿ ರೈತರಿಗಾಗಿ ಜಾರಿಗೆ ತಂದ ನೀರಾವರಿ ಯೋಜನೆಗಳು, ಮಹಿಳಾ ಮೀಸಲಾತಿ, ಅಲ್ಪಸಂಖ್ಯಾತರ ಅಭಿವೃದ್ದಿ ಸೇರಿದಂತೆ ಹಲವು ಸಾಮಾಜಿಕ ಹಿತಚಿಂತನೆಯ ಯೋಜನೆಗಳು ಬೇರೆಯವರು ಅನುಕರಿಸಬಹುದಾದಂಥವು” ಎಂದು ಹೇಳಿದರು.
“ಇಂದು ನಾವು ಜನ್ಮದಿನಗಳನ್ನೇನಾದರೂ ಆಚರಿಸುತ್ತೇವೆ. ಆದರೆ, ಅದನ್ನು ಪರಿಸರದ ಹಿತದೃಷ್ಟಿಯಿಂದ, ಪ್ರಾಣಿಗಳ ಕಲ್ಯಾಣದ ದೃಷ್ಟಿಯಿಂದ ಆಚರಿಸಿದರೆ ಅದು ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಪ್ರತಿ ವ್ಯಕ್ತಿಯೂ ತಮ್ಮ ಜನ್ಮದಿನ, ಪ್ರೀತಿಯವರ ವಿಶೇಷ ದಿನಗಳು ಅಥವಾ ಯಾವುದೇ ಸ್ಮರಣಾರ್ಥದ ದಿನವನ್ನು ಪಕ್ಷಿ ಅಥವಾ ಪ್ರಾಣಿಗಳನ್ನು ದತ್ತು ಪಡೆದು ಆಚರಿಸಿದರೆ, ಅದು ಪರಿಸರ ಉಳಿವಿಗೆ ಸಹಕಾರಿಯಾಗುತ್ತದೆ” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಸ್ನೇಹ ಕೊಪ್ಪಳರವರಿಗೆ, ದೇವೇಗೌಡರ ಜನ್ಮದಿನದ ನಿಮಿತ್ತ ಸ್ಮರಣಾರ್ಥವಾಗಿ ಒಂತಿಗೆ ಸಲ್ಲಿಸಲಾಯಿತು ಹಾಗೂ ಪಕ್ಷಿಗಳನ್ನು ಅಧಿಕೃತವಾಗಿ ದತ್ತು ಪಡೆಯಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಹಿರಿಯ ನಾಯಕರು ಎಂ.ಎಸ್. ಪರ್ವತಗೌಡ್ರ, ಬಸವರಾಜ ಅಪ್ಪಣ್ಣವರ, ಪ್ರಫುಲ್ಲ ಪುನೇಕರ, ಜೋಸೆಫ್ ಉದೋಜಿ ಹಾಗೂ ಸಂತೋಷ್ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದರು.
