Home » News » ಗದಗ ಜಿಲ್ಲೆಯಲ್ಲಿ ಮತ್ತೆ ದೇವರಮೂರ್ತಿಗಳ ಧ್ವಂಸ..! ಒಂದೇ ರಾತ್ರಿ ಎರೆಡು ಕಡೆಗಳಲ್ಲಿ ಘಟನೆ..! ಹಿಂದೂ ಧರ್ಮದ ಭಾವನೆಗಳಿಗೆ ತೀವ್ರ ಧಕ್ಕೆ..!

ಗದಗ ಜಿಲ್ಲೆಯಲ್ಲಿ ಮತ್ತೆ ದೇವರಮೂರ್ತಿಗಳ ಧ್ವಂಸ..! ಒಂದೇ ರಾತ್ರಿ ಎರೆಡು ಕಡೆಗಳಲ್ಲಿ ಘಟನೆ..! ಹಿಂದೂ ಧರ್ಮದ ಭಾವನೆಗಳಿಗೆ ತೀವ್ರ ಧಕ್ಕೆ..!

by CityXPress
0 comments

ಗದಗ:
ಗದಗ ಜಿಲ್ಲೆಯಲ್ಲಿ ಹಿಂದೂ ಧರ್ಮದ ದೇವರುಗಳ ಮೂರ್ತಿಗಳನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳ ಕೃತ್ಯಗಳು ಮತ್ತೆ ಮುಂದುವರೆದಿವೆ.

🖋ವರದಿ:ಮಹಲಿಂಗೇಶ ಹಿರೇಮಠ. ಗದಗ

ಇತ್ತೀಚೆಗೆ ಶಿವರಾತ್ರಿ ದಿನದಂದು ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ನಡೆದ ದೇವರಮೂರ್ತಿ ಭಗ್ನ ಪ್ರಕರಣದ ಮಾಸುವ ಮುನ್ನವೇ, ಇದೀಗ ಮತ್ತೆರಡು ಕಡೆಗಳಲ್ಲಿ ದೇವಸ್ಥಾನಗಳ ಮೇಲೆ ದಾಳಿ ನಡೆದಿರುವುದು ಜಿಲ್ಲೆಯಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಾರಿ ಪುನಃ ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮ ಮತ್ತು ಲಕ್ಷ್ಮೇಶ್ವರ ತಾಲೂಕು ಆದರಳ್ಳಿ ಸಮೀಪದ ದೇವಸ್ಥಾನಗಳು ದುಷ್ಕರ್ಮಿಗಳ ಗುರಿಯಾಗಿವೆ.

banner

ಮಲ್ಲಿಕಾರ್ಜುನಪುರ ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲಿರುವ ಗಾಳಿಗುಂಡಿ ಬಸವೇಶ್ವರ (ಗಾಳಿಬಸವೇಶ್ವರ) ದೇವಸ್ಥಾನದಲ್ಲಿ ಈಶ್ವರ ಲಿಂಗವನ್ನು ಧ್ವಂಸಗೊಳಿಸಲಾಗಿದೆ. ಮತ್ತೊಂದೆಡೆ, ಆದರಳ್ಳಿ ಸಮೀಪದ ದಂಡೇರಿ ಮರಿಯಮ್ಮ ದೇವಸ್ಥಾನದಲ್ಲಿ ದೇವಿಯ ಮೂರ್ತಿಯ ಮುಖಭಾಗವನ್ನು ಸಂಪೂರ್ಣವಾಗಿ ಹಾನಿಗೊಳಿಸಲಾಗಿದೆ.

ಇತ್ತೀಚೆಗಷ್ಟೇ ಶಿವರಾತ್ರಿ ದಿನದಂದು ಶಿಂಗಟಾಲೂರು ಗ್ರಾಮದಲ್ಲಿ ಶಿವಲಿಂಗ, ನಂದಿ ವಿಗ್ರಹ ಹಾಗೂ ಹೊನ್ನತ್ತೆಮ್ಮ ಮೂರ್ತಿಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದ ಘಟನೆ ಜನಮನದಲ್ಲಿ ಆಘಾತ ಮೂಡಿಸಿತ್ತು.

ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರೋಪಿಗಳ ಪತ್ತೆಯಾಗದಿರುವುದೇ ಇಂತಹ ಕೃತ್ಯಗಳಿಗೆ ಮತ್ತಷ್ಟು ಧೈರ್ಯ ತುಂಬಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.ಪುರಾತನ ಕಾಲದ, ವಿಶೇಷವಾಗಿ ಜನವಸತಿ ಕಡಿಮೆ ಇರುವ ಪ್ರದೇಶಗಳಲ್ಲಿನ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಇಂತಹ ದುಷ್ಕೃತ್ಯಗಳು ನಡೆಯುತ್ತಿರುವುದು ಶಂಕೆಗೆ ಕಾರಣವಾಗಿದೆ.

ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಗ್ರಾಮೀಣ ಸಂಸ್ಕೃತಿ, ಇತಿಹಾಸ ಮತ್ತು ಜನಭಾವನೆಗಳ ಪ್ರತೀಕವಾಗಿವೆ. ಇಂತಹ ಪವಿತ್ರ ಸ್ಥಳಗಳ ಮೇಲೆ ಮರುಮರು ದಾಳಿ ನಡೆಯುತ್ತಿರುವುದು ಹಿಂದೂ ಧರ್ಮದ ಭಾವನೆಗಳಿಗೆ ಗಂಭೀರ ಧಕ್ಕೆ ಉಂಟುಮಾಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಗಳು ಮುಂಡರಗಿ ಪೊಲೀಸ್ ಠಾಣೆ ಹಾಗೂ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿವೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕಾದ ಖಾಕಿ ಪಡೆ ಇನ್ನಾದರೂ ಈ ಸರಣಿ ಘಟನೆಗಳಿಗೆ ಕಡಿವಾಣ ಹಾಕುತ್ತದೆಯೇ? ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೇ? ಎಂಬ ನಿರೀಕ್ಷೆ ಜನಸಾಮಾನ್ಯರಲ್ಲಿ ಗಟ್ಟಿಯಾಗುತ್ತಿದೆ.

ಗ್ರಾಮಸ್ಥರು ಹಾಗೂ ಧಾರ್ಮಿಕ ಸಂಘಟನೆಗಳು ಪೊಲೀಸ್ ಇಲಾಖೆ ತ್ವರಿತ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಪತ್ತೆಹಚ್ಚಬೇಕು, ದೇವಸ್ಥಾನಗಳ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಮರುಕಳಿಸುತ್ತಿರುವ ಈ ಘಟನೆಗಳು ಆಡಳಿತದ ಎಚ್ಚರಿಕೆಯ ಘಂಟೆಯಾಗಿವೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb