ಬೆಂಗಳೂರು, ಏಪ್ರಿಲ್ 28:ಪಹಲ್ಗಾಮ್ ಉಗ್ರ ದಾಳಿಯ ಪ್ರತಿಯಾಗಿ ಭಾರತ ಪಾಕಿಸ್ತಾನದ ವಿರುದ್ಧ ತೀವ್ರ ಹೋರಾಟಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ, ಅವರನ್ನು ಗಡಿಪಾರು ಮಾಡುವ ಕಾರ್ಯ ಆರಂಭವಾಗಿದೆ. ಈ ಹಿನ್ನೆಲೆ ಕರ್ನಾಟಕದಲ್ಲೂ ಪಾಕ್ ಪ್ರಜೆಗಳನ್ನು ವಾಪಸ್ ಕಳಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಉದ್ಯಮ ಮತ್ತು ವೈದ್ಯಕೀಯ ವೀಸಾ ಮೇಲೆ ಕರ್ನಾಟಕದಲ್ಲಿದ್ದ ಪಾಕಿಸ್ತಾನಿ ಪ್ರಜೆಗಳ ಪೈಕಿ ನಾಲ್ವರನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಪಾಕ್ ಪ್ರಜೆಗಳು ಇದ್ದು, ಅವರಿಗೆ ಗೇಟ್ ಪಾಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ದೀರ್ಘಾವಧಿ ವೀಸಾ ಹೊಂದಿರುವ 90ಕ್ಕೂ ಹೆಚ್ಚು ಪಾಕ್ ಪ್ರಜೆಗಳು ಸದ್ಯ ರಾಜ್ಯದಲ್ಲಿ ಇರುವ ಮಾಹಿತಿ ಲಭ್ಯವಾಗಿದೆ. ದೀರ್ಘಾವಧಿ ವೀಸಾ ಹೊಂದಿರುವವರನ್ನು ತಕ್ಷಣವೇ ಗಡಿಪಾರು ಮಾಡುವ ಕುರಿತಂತೆ ಯಾವುದೇ ಸೂಚನೆ ಇಲ್ಲ ಎಂದು ಮೂಲಗಳು ಹೇಳಿವೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಕಾರವಾರದಲ್ಲಿ ಹೆಚ್ಚಿನ ಪಾಕ್ ಪ್ರಜೆಗಳು ನೆಲೆಸಿದ್ದಾರೆ. ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಮಂಗಳೂರಿನಲ್ಲಿಯೂ ಪಾಕ್ ಪ್ರಜೆಗಳ ಹಾಜರಾತಿ ದಾಖಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ರಾಜ್ಯದಾದ್ಯಂತ ಪಾಕಿಸ್ತಾನಿ ಪ್ರಜೆಗಳ ಮಾಹಿತಿ ಸಂಗ್ರಹಿಸಿ, ಅವರನ್ನು ವಾಪಸ್ ಕಳಿಸುವ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
“ಭಾರತವನ್ನು ಕೆಣಕಿದರೆ ನಾವು ಮೌನವಾಗಿರುವುದಿಲ್ಲ. ಯಾವುದೇ ದೇಶವಿರಲಿ, ಭಾರತದ ಸಾರ್ವಭೌಮತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ. ಯುದ್ಧದ ಪರವಾಗಿ ನಾವು ನಿಲ್ಲುವುದಿಲ್ಲ, ಆದರೆ ಅಗತ್ಯವಿದ್ದರೆ ಭಾರತ ಸದಾ ಸಜ್ಜಾಗಿದೆ,” ಎಂದು ಸಿಎಂ ಹೇಳಿದರು.
ಭಯೋತ್ಪಾದನೆ ವಿರುದ್ಧ ಬಿಗುವು ಇಟ್ಟು, ಕಾಶ್ಮೀರದಲ್ಲಿ ಭದ್ರತಾ ಕ್ರಮಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಪ್ರವಾಸಿಗರ ಹೆಚ್ಚಿನ ಪ್ರವಾಹವಿರುವ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ವಿಳಂಬವಾಗಿದೆ ಎಂಬುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ ಎಂದರು.

“ಭದ್ರತೆ ಹೆಚ್ಚಿಸಿ, ಶಾಂತಿ ಸ್ಥಾಪಿಸಿ, ಭಾರತವನ್ನು ಭಯ ಮುಕ್ತವಾಗಿ ಗಟ್ಟಿ ಮಾಡೋಣ” ಎಂಬ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೂಡ ಕೇಂದ್ರ ಸರ್ಕಾರದೊಂದಿಗೆ ಹೆಜ್ಜೆ ಹಾಕುತ್ತಿದೆ.
