ಗದಗ: ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಒಳಮೀಸಲಾತಿ ಜಾರಿಮಾಡಿದ ನಂತರ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯವಾಗಿದ್ದು, ಡಿ.೮ ರಿಂದ ನಡೆಯುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಅನ್ಯಾಯ ಸರಿಪಡಿಸಲು ರಾಜ್ಯ ಸರಕಾರ ಮುಂದಾಗ ಬೇಕು ಎಂದು ಬಂಜಾರ ಯುವ ಮುಖಂಡರಾದ ರವಿ ಎಸ್ ಲಮಾಣಿ ಹಾಗೂ ದುಂಡಪ್ಪ ಆರ್ ಲಮಾಣಿ ಲಮಾಣಿ ಆಗ್ರಹಿಸಿದರು.
ವರದಿ : ಪರಮೇಶ ಎಸ್ ಲಮಾಣಿ.
ಈ ಕುರಿತು ಮಾಧ್ಯಮ ಮೂಲಕ ಒತ್ತಾಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಒಳಮೀಸಲಾತಿಯಿಂದ ಪರಿಶಿಷ್ಟ ಜಾತಿಯ ೧೦೧ ಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಚುನಾವಣೆ ಸಮಯದಲ್ಲಿ ಭರವಸೆ ನೀಡಿದ್ದರು. ಆದರೆ, ಸರಕಾರಿ ಹುದ್ದೆಗಳ ನೇಮಕದ ರೋಸ್ಟರ್ ಬಿಡುಗಡೆಯಾದ ಬಳಿಕ ನಮಗೆ ಅವಕಾಶಗಳು ಕಡಿಮೆಯಾಗಿವೆ ಎಂದು ಆರೋಪಿಸಿದರು.
ಸರಕಾರಿ ನೇಮಕಾತಿಯಲ್ಲಿ ಬೆಳಕಿಗೆ ಬಂದಿದೆ ಹಿಂದೆ ೧೦೦ ಹುದ್ದೆಗಳಲ್ಲಿ ಶೇ.೧೭ರಷ್ಟು ಮೀಸಲಾತಿ ಅನ್ವಯ ಪರಿಶಿಷ್ಟ ಜಾತಿಯ ಎಲ್ಲರಿಗೂ ೧೭-೧೮ ಹುದ್ದೆಗಳಿಗೆ ಸ್ಪರ್ಧಿಸುವ ಅವಕಾಶವಿತ್ತು. ಆದರೆ, ಹೊಸ ರೋಸ್ಟರನಂತೆ ೧೦೦ ಹುದ್ದೆಗಳಲ್ಲಿ ೧ರಿಂದ೨ ಹುದ್ದೆಗಳು ಮಾತ್ರ ಸಿಗುತ್ತಿವೆ. ಇದು ಘೋರ ಅನ್ಯಾಯ. ಇಂತಹ ಸಮಸ್ಯೆ ಇತರೆ ಹುದ್ದೆಗಳು ಹಾಗೂ ಬ್ಯಾಂಕಿಂಗ್ ಹುದ್ದೆಗಳ ನೇಮಕದಲ್ಲೂ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಂಪರಿಕಲ್ ದತ್ತಾಂಶವನ್ನು ಪರಿಗಣಿಸಿಲ್ಲ, ಬಂಜಾರ ಸಮುದಾಯದ ಜನಸಂಖ್ಯೆಯನ್ನು ೧೧ ಲಕ್ಷ ಎಂದು ತೋರಿಸಲಾಗಿದೆ.
ಆದರೆ, ವಾಸ್ತವದಲ್ಲಿ ಒಟ್ಟು ೩೦ ರಿಂದ ೩೫ ಲಕ್ಷ ಬಂಜಾರ ಸಮುದಾಯದವರಿದ್ದಾರೆ. ತಪ್ಪು ದತ್ತಾಂಶದ ಆಧಾರದಲ್ಲಿ ಮೀಸಲು ಹಂಚಿಕೆ ಮಾಡಿರುವುದು ಸರಿಯಲ್ಲ ಎಂದರು.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಗುಂಪು-ಸಿ ಬದಲಿಗೆ, ರೋಸ್ಟರನ್ನು ಮಾರ್ಪಡಿಸಿ ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಏಕ ಗವಾಕ್ಷಿ ಪದ್ದತಿ ಜಾರಿಗೊಳಿಸಬೇಕು. ಅಲೆಮಾರಿ ಸಮುದಾಯದವರಿಗೆ ಪ್ರತ್ಯೇಕವಾಗಿ ಶೇ.೧ರಷ್ಟು ಮೀಸಲು ನೀಡಬೇಕು. ಹಿಂದಿನ ಸರಕಾರ ಒಳಮೀಸಲು ವಿಷಯದಲ್ಲಿ ಎಡವಿದ ಕಾರಣಕ್ಕಾಗಿಯೇ ಬಂಜಾರ ಸಮುದಾಯದ ವಿರೋಧ ಕಟ್ಟಿಕೊಂಡು ಸೋಲಬೇಕಾಯಿತು.
ಈಗಿನ ಕಾಂಗ್ರೆಸ್ ಸರಕಾರ ಕೂಡ ಅದೇ ದಾರಿಯಲ್ಲಿ ಸಾಗಬಾರದು, ಒಂದು ವೇಳೆ ತಾವು ಸರಿಪಡಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಇಡೀ ಬಂಜಾರ ಸಮುದಾಯ ಒಗ್ಗೂಡಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತೆ ಎಂದು ಎಚ್ಚರಿಸಿದರು.
