ಲಕ್ಷ್ಮೇಶ್ವರ: ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಸೃಷ್ಟಿಸುವುದರ ಜತೆಗೆ ರೈತರಿಗೂ,ಜಾನುವಾರುಗಳಿಗೂ ಸದುಪಯೋಗವಾಗಲಿ ಎಂದು ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳುವಂತೆ ಸರ್ಕಾರ, ಪಂಚಾಯತ್ ಗಳು ಪ್ರಚಾರ ಮಾಡುತ್ತಿದ್ದರೂ ರೈತರು ಮಾತ್ರ ಇದರತ್ತ ಒಲವು ತೋರದೆ ದೂರ ಸರಿಯುತ್ತಿದ್ದಾರೆ.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ಕಳೆದ ಎರಡು ವರ್ಷದಿಂದ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡ ರೈತರಿಗೆ ಸಹಾಯ ಧನ ಸಿಗುತ್ತಿಲ್ಲ. ಗ್ರಾ.ಪಂ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ಪ್ರತಿ ಗ್ರಾಪಂನಿಂದ ಇಂತಿಷ್ಟು ದನದ ಕೊಟ್ಟಿಗೆಗಳನ್ನು ನಿರ್ಮಿಸಬೇಕೆಂದು ಜಿಲ್ಲಾ ಪಂಚಾಯತ್ ಗುರಿ ನಿಗದಿಪಡಿಸಿದೆ.
ದನದ ಕೊಟ್ಟಿಗೆ ನಿರ್ಮಿಸಿಕೊಂಡರೆ ಸರಕಾರದಿಂದ ಎಸ್‌ಸಿ/ಎಸ್‌ಟಿ ವರ್ಗದವರಿಗೆ 57,000 ರೂ. ಸಹಾಯಧನ ಸಿಗಲಿದೆ. ಆದರೆ ದನದ ಕೊಟ್ಟಿಗೆ ನಿರ್ಮಾಣಕ್ಕೆ ಕನಿಷ್ಟ 60,000 ಖರ್ಚಾಗುತ್ತೆ. 57000 ರೂ ಹಣವನ್ನು ಸರಕಾರ ನೀಡುತ್ತದೆ. ಆ ಹಣ ಪಡೆಯಲು ಗ್ರಾಪಂ ಬಾಗಿಲಿಗೆ ಅಲೆದಾಡುವದಲ್ಲದೇ, ಸರಕಾರದ ಹಣಕ್ಕಾಗಿ ಬೇಸತ್ತು ಹೋಗುವಂತಾಗಿದೆ. ರೈತರು ವಿವಿಧಡೆ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ.
ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ದಿನದಿಂದ ದಿನಕ್ಕೆ ಕಠಿಣವಾದ ನಿಯಮವನ್ನು ತರುತ್ತಿದ್ದು, ಫಲಾನುಭವಿಗಳಿಗೆ ತೊಂದರೆ ಆಗುತ್ತಿದೆ. ಎರಡು ವರ್ಷದ ಹಿಂದೆ ದನದ ಕೊಟ್ಟಿ ನಿರ್ಮಾಣದ ಸಹಾಯಧನವನ್ನು ಗುತ್ತಿಗೆದಾರರ ( ವೆಂಡರ್) ಮೂಲಕ ಹಣ ಪಾವತಿ ಆಗುತ್ತಿತ್ತು, ಆದರೆ ಇಗ ನೇರ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ನಿಯಮವನ್ನು ತಂದಿದ್ದರ ಕಾರಣದಿಂದಾಗಿ ಸರ್ಕಾರ ನೀಡುವ ಹಣ ಪಾವತಿ ಆಗಿಲ್ಲ ಎನ್ನಲಾಗುತ್ತಿದೆ.
ಕೊಯ್ಲು ಸಮಯದಲ್ಲಿ ನಿರ್ಮಾಣ:
ಸಾಮಾನ್ಯವಾಗಿ ಅಕ್ಟೋಬರ್ ತಿಂಗಳ ಬಳಿಕ ರೈತರು ಬೆಳೆ ಕಟಾವು ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಮಯ ವ್ಯಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಆದರೆ ಸರಕಾರಿ ಅಧಿಕಾರಿಗಳು ಮಾತ್ರ ಇಂತಹ ಸಮಯದಲ್ಲೇ ಕೊಟ್ಟಿಗೆ ನಿರ್ಮಿಸಿಕೊಳ್ಳುವಂತೆ ದುಂಬಾಲು ಬೀಳುತ್ತಿದ್ದಾರೆ.ಫೆಬ್ರುವರಿ, ಮಾರ್ಚ್ ಬಳಿಕ ಕೃಷಿ ಚಟುವಟಿಕೆಗಳು ಕಡಿಮೆಯಾಗಿದ್ದಾಗ ಇಂತಹ ಕೆಲಸ ಕೈಗೊಂಡರೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದು. ಆದರೆ ಕೂಯ್ಲು ಸಮಯದಲ್ಲಿ ಬಂದು ಇತರೆ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಹೇಳಿದರೆ ಲಕ್ಷ್ಯ ವಹಿಸುವುದು ತೀರ ಕಡಿಮೆ ಎಂಬುದು ಬಹುತೇಕ ರೈತರ ಅಭಿಪ್ರಾಯ.
ಕೂಲಿ ಹಣ ವಾರದೊಳಗೆ ರೈತನ ಖಾತೆ ಸೇರಲಿದೆ. ಆದರೆ ಸಾಮಗ್ರಿ ಹಣಕ್ಕಾಗಿ ವರ್ಷಗಟ್ಟಲೆ ಕಾಯಬೇಕಾಗಿದೆ. ಆದರೆ ದನದ ಕೊಟ್ಟಿಗೆ ನಿರ್ಮಾಣದಿಂದ ರೈತರಿಗೂ ಅನುಕೂಲವಾಗುತ್ತದೆ ಎಂದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು ಬಿಲ್ ಗಾಗಿ ಪರದಾಡುವಂತಾಗಿದೆ.
ಸರಕಾರ ರಾಜ್ಯದ ರೈತರ ಸಮಸ್ಯೆಗಳನ್ನು ಪರಿಗಣಿಸಿಕೊಂಡು ಸುಲಭವಾಗಿ ಹಾಗೂ ನೇರವಾಗಿ ಫಲನುಭವಿಗಳ ಖಾತೆಗೆ ಹಣ ಜಮಾ ಮಾಡುವುದರ ಜತೆಗೆ ಕಾಲ ಮಿತಿಯಲ್ಲಿ ಪಾವತಿಸುವಂತಾಗಬೇಕಾಗಿದೆ.
ಕೋಟ್:
ನರೇಗಾ ಯೋಜನೆಯು ರಾಜ್ಯದ ರೈತರಿಗೆ ಹಾಗೂ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ನಿಗದಿತ ಸಮಯದಲ್ಲಿ ಕೂಲಿ ಹಣ ಪಾವತಿಸುವದಾಗಿದೆ. ಆದರೆ ಎರಡು ವರ್ಷದಿಂದ ದನದ ಕೊಟ್ಟಿಗೆ ನಿರ್ಮಿಸಿಕೊಂಡ ಸಹಾಯಧನ ಪಡೆಯುವುದಕ್ಕೆ ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ನರೇಗಾ ಯೋಜನೆಯಲ್ಲಿ ಹಲವಾರು ನಿಯಮಗಳನ್ನು ತರುತ್ತಿದ್ದು, ದುಡಿಯುವ ಕೈಗಳಿಗೆ ಬೀಗ ಹಾಕಿದಂತಾಗಿದೆ. ಕೇಂದ್ರ ಸರ್ಕಾರದ ಈ ನಿಯಮಗಳ ಧೋರಣೆಯನ್ನು ನೋಡಿದರೆ ನರೇಗಾ ಯೋಜನೆಯನ್ನೆ ಸ್ಥಗಿತ ಗೊಳಿಸುವ ನಿಟ್ಟಿನಲ್ಲಿ ಹೋಗುತ್ತಿದೆ ಎನೋ ಅಂತ ಪ್ರಶ್ನೆ ಕಾಡುತ್ತಿದೆ.
ಪದ್ಮರಾಜ ಪಾಟೀಲ , ಸದಸ್ಯರು, ಗ್ರಾಮ ಪಂಚಾಯತ್ ಗೋವನಾಳ.
