ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ನಡೆದ ಕಳ್ಳತನ ಯತ್ನವನ್ನು, ಸಾವಿರಾರು ಮೈಲಿ ದೂರದಲ್ಲಿದ್ದ ಮಗಳು ತಪ್ಪಿಸಿದ್ದಾರೆ ಅನ್ನೋದು ಕೇಳುತ್ತಿದ್ದಂತೆಯೇ ಸಿನಿಮಾ ಕಥೆ ಅನಿಸುತ್ತದೆ. ಆದರೆ ಇದು ನಿಜವಾದ ಘಟನೆ!
ಹೌದು,ನಿನ್ನೆ ರಾತ್ರಿ ಮುಧೋಳದ ಸಿದ್ದರಾಮೇಶ್ವರ ನಗರ ಪ್ರದೇಶದಲ್ಲಿ ಚಡ್ಡಿ ಕಳ್ಳರ ಗ್ಯಾಂಗ್ ಮನೆಗೆ ನುಗ್ಗಿದ್ರು. ಮೈಮೇಲೆ ಶರ್ಟ್ ಹಾಕಿಕೊಂಡಿದ್ದರೂ ಕೆಳಗಡೆ ಕೇವಲ ಚಡ್ಡಿ ತೊಟ್ಟ ಕಳ್ಳರು – ಯಾವುದೇ ಭಯವಿಲ್ಲದೆ ರಾಜರೋಷವಾಗಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಗ್ಯಾಂಗ್‌ನ ಗುರಿ, ನಿವೃತ್ತ ಪಿಡಬ್ಲ್ಯುಡಿ ಇಂಜಿನಿಯರ್ ಹನುಮಂತಗೌಡ ಸಂಕಪ್ಪನವರ ಮನೆಯಾಗಿತ್ತು.
ಹನುಮಂತಗೌಡ ಸಂಕಪ್ಪನವರ ತಮ್ಮ ಪತ್ನಿಯ ಜೊತೆಗೆ ಮಾತ್ರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಮಗಳು ಶೃತಿ ಅಮೇರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಅಮೇರಿಕಾದಲ್ಲಿರುವ ಅವರು ತಮ್ಮ ಮೊಬೈಲ್‌ಗೆ ಲಿಂಕ್ ಮಾಡಿಕೊಂಡಿದ್ದಾರೆ.ಈ ಲಿಂಕ್ ಮಾಡಿಕೊಂಡಿದ್ದೇ, ಸದ್ಯ ಈ ಸುದ್ದಿಗೆ ಕೇಂದ್ರಬಿಂದುವಾಗಿದೆ.
ಸಮಯದ ಅದ್ಭುತ ಆಟ!
ಮುಧೋಳದಲ್ಲಿ ರಾತ್ರಿ ಒಂದು ಗಂಟೆಯಾಗಿತ್ತು, ಆದರೆ ಅಮೇರಿಕಾದಲ್ಲಿ ಹಗಲು ಹೊತ್ತು. ಸಿಸಿ ಕ್ಯಾಮೆರಾದಲ್ಲಿ ಅಪರಿಚಿತರ ಸಂಚಲನ ಗಮನಿಸಿದ ಶೃತಿ ತಕ್ಷಣವೇ ತಮ್ಮ ತಂದೆ ತಾಯಿಗೆ ಕರೆ ಮಾಡಿದ್ದಾರೆ.
📞 “ಅಪ್ಪಾ, ಮನೆಯೊಳಗೆ ಯಾರೋ ಬರುತ್ತಿದ್ದಾರೆ! ಎಚ್ಚರವಾಗಿರಿ…” ಎಂದು ದೂರದಿಂದಲೇ ಎಚ್ಚರಿಸಿದ್ದಾರೆ.
ಆಗ ಹನುಮಂತಗೌಡ ಸಂಕಪ್ಪನವರ ತಕ್ಷಣ ಬಾಗಿಲು ತೆರೆಯುತ್ತಿದ್ದಂತೆ, ಭೀತಿಗೊಂಡ ಕಳ್ಳರು ತಕ್ಷಣ ಪರಾರಿಯಾಗಿದ್ದಾರೆ. ಹೀಗಾಗಿ ಖದೀಮರ ಕಳ್ಳತನ ವಿಫಲವಾಗಿದೆ.
ಆದರೆ ಇದೇ ಗ್ಯಾಂಗ್ ಅಲ್ಲಿಂದ ಹತ್ತಿರದ ಅಶೋಕ ಕರಿಹೊನ್ನ ಅವರ ಮನೆಯಲ್ಲಿ ಕಳ್ಳತನ ಮಾಡಿ ೧೧ ಗ್ರಾಂ ಚಿನ್ನ ಮತ್ತು ₹೪೦ ಸಾವಿರ ದೋಚಿದ್ದಾರೆ ಎಂಬುದು ಬಳಿಕ ಬೆಳಕಿಗೆ ಬಂದಿದೆ.
ಹನುಮಂತಗೌಡ ಸಂಕಪ್ಪನವರ ಆತ್ಮೀಯವಾಗಿ ಹೇಳಿದ್ದು ಹೀಗಿದೆ:
“ಮಗಳು ಶೃತಿ ಅಮೇರಿಕಾದಿಂದಲೇ ಕರೆಮಾಡಿ ಎಚ್ಚರಿಸದಿದ್ದರೆ ಇಂದು ನಮ್ಮ ಮನೆಗೂ ಭಾರೀ ನಷ್ಟವಾಗುತ್ತಿತ್ತು. ದೇವರ ಕೃಪೆ ಮತ್ತು ಮಗಳ ಸಮಯಪ್ರಜ್ಞೆಯಿಂದ ನಾವು ಬಚಾವ್ ಆಗಿದ್ದೇವೆ.”
ಘಟನೆಯ ಬಳಿಕ ಮುಧೋಳ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದ್ದಾರೆ. ಆದರೆ ಚಡ್ಡಿ ಗ್ಯಾಂಗ್ ಆ ವೇಳೆಗೆ ಪರಾರಿಯಾಗಿದೆ.
ಈ ಕುರಿತು ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್ ಹೇಳಿದ್ದು ಹೀಗೆ:
“ಪ್ರಕರಣ ದಾಖಲಿಸಿಕೊಂಡಿದ್ದೇವೆ. ಗ್ಯಾಂಗ್ ಶೀಘ್ರದಲ್ಲೇ ಪೊಲೀಸರ ಬಲೆಗೆ ಸಿಲುಕಲಿದ್ದಾರೆ.”
ಒಟ್ಟಿನಲ್ಲಿ, ಸಾವಿರಾರು ಮೈಲು ದೂರದಲ್ಲಿದ್ದ ಮಗಳ ಸಮಯಪ್ರಜ್ಞೆ – ಕರ್ನಾಟಕದ ಮನೆಯಲ್ಲಿ ನಡೆಯಬೇಕಿದ್ದ ಕಳ್ಳತನವನ್ನು ತಪ್ಪಿಸಿದ್ದು ಕ್ರೈಂ ಜಗತ್ತಿನಲ್ಲಿ ಅಪರೂಪದ ಘಟನೆಯಾಗಿದೆ.