ಡಂಬಳ :
ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ಪ್ರತಿವರ್ಷದಂತೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯಿಂದ ನಡೆಸಲಾಗುತ್ತಿದ್ದ ವಿವಿಧ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಈ ಬಾರಿ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬದಂದು, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿಯ ಆವರಣದಲ್ಲಿ ಇಂದು ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಸಕ್ರಿಯವಾಗಿ ಪಾಲ್ಗೊಳ್ಳುವ ಹಲವು ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ದೇಶಭಕ್ತಿ ಗೀತೆಗಳು, ನೃತ್ಯ, ಕ್ರೀಡಾ ಸ್ಪರ್ಧೆಗಳು ಹಾಗೂ ಗೌರವ ಸಮಾರಂಭಗಳು ಭವ್ಯವಾಗಿ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಕಾರಣವನ್ನು ಸ್ಪಷ್ಟಪಡಿಸದೇ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದುಪಡಿಸಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಮತ್ತು ಹಲವಾರು ಜನಪ್ರತಿನಿಧಿಗಳು ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲೇ ಧರಣಿ ಹೋರಾಟಕ್ಕೆ ಇಳಿದು, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. “ರಾಷ್ಟ್ರೀಯ ಹಬ್ಬವು ಕೇವಲ ಧ್ವಜಾರೋಹಣದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಇದು ದೇಶಭಕ್ತಿಯನ್ನು ಬೆಳೆಸುವ ಹಾಗೂ ಗ್ರಾಮದಲ್ಲಿ ಒಗ್ಗಟ್ಟನ್ನು ತರುವ ಪ್ರಮುಖ ವೇದಿಕೆ. ಆದ್ದರಿಂದ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದುವರಿಸಬೇಕು” ಎಂದು ಒತ್ತಾಯಿಸಿದರು.
ಹೋರಾಟದಲ್ಲಿ ಪಾಲ್ಗೊಂಡಿದ್ದ ಕೆಲ ಗ್ರಾಮಸ್ಥರು, “ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಈ ಬಾರಿಯ ನಿರ್ಧಾರವನ್ನು ಮರುಪರಿಶೀಲಿಸಿ, ತಕ್ಷಣವೇ ಮಕ್ಕಳ ಹಾಗೂ ಯುವಕರಿಗೆ ಉತ್ಸಾಹ ನೀಡುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ನಡೆದ ಈ ಧರಣಿಯಲ್ಲಿ ಹಲವಾರು ಹಿರಿಯರು, ಯುವಕರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಹೋರಾಟದ ವೇಳೆ ‘ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಈ ಘಟನೆ, ಗ್ರಾಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮಹತ್ವವನ್ನು ಪುನಃ ನೆನಪಿಸುವಂತಾಗಿದೆ. ಈಗ ಆಡಳಿತ ಮಂಡಳಿಯಾಗಲಿ ಅಥವಾ ಸಂಬಂಧಿಸಿದ ಹಿರಿಯ ಅಧಿಕಾರಿಗಳಾಗಲಿ ಜನರ ಆಕ್ರೋಶವನ್ನು ಗಮನಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನ ಕಾದು ನೋಡಬೇಕು. ಹಾಗೂ ಪ್ರತಿಭಟನೆಗೆ ಕಾರಣರಾದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ ಅನ್ನೋದು ಪ್ರತಿಭಟನಾಕಾರರ ಒತ್ತಾಯವಾಗಿದೆ.