ಗದಗ:
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹಾಗೂ ಡೋಣಿ ಗ್ರಾಮದ ರೈತರು ಇಂದು ಶಿಂಗಟಾಲೂರ ಏತ ನೀರಾವರಿ ಯೋಜನೆಯ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ತಮ್ಮ ಬೇಡಿಕೆಗಳನ್ನು ಸ್ಪಷ್ಟವಾಗಿ ಮಂಡಿಸಿದರು. ಕಳೆದ ಹಲವಾರು ವರ್ಷಗಳಿಂದ ಕಾಲುವೆಯ ಬಸಿ ನೀರಿನಿಂದ ಸಾವಿರಾರು ಎಕರೆ ಕೃಷಿಭೂಮಿಗಳು ಹಾಳಾಗಿ, ರೈತರ ಪರಿಶ್ರಮ ವ್ಯರ್ಥವಾಗುತ್ತಿರುವ ಹಿನ್ನೆಲೆಯಲ್ಲಿ, ಶಾಶ್ವತ ಪರಿಹಾರ ಒದಗಿಸಬೇಕೆಂದು ರೈತರು ಒತ್ತಾಯಿಸಿದರು.
ಸ್ಥಳೀಯ ರೈತರ ಪ್ರಕಾರ, ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆಯಿಂದ ನಿರಂತರವಾಗಿ ಬಸಿ ನೀರು ಜಮೀನಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಫಲವಾಗಿ ಧಾನ್ಯ, ಹತ್ತಿ, ಜೋಳ, ತೊಗರಿ ಮುಂತಾದ ಬೆಳೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ರೈತರು ನಿರಂತರ ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆಯನ್ನು ಹಲವು ಹಂತಗಳಲ್ಲಿ ಅಧಿಕಾರಿಗಳಿಗೆ ತಿಳಿಸಿದರೂ, ಯಾವುದೇ ಶಾಶ್ವತ ಪರಿಹಾರ ದೊರೆಯದ ಕಾರಣದಿಂದ ರೈತರು ಕೋಪಗೊಂಡು ಇಂದು ದಿಗ್ಬಂಧನ ನಡೆಸಿದರು.
ಪರಿಶೀಲನೆಗಾಗಿ ಸ್ಥಳಕ್ಕೆ ಆಗಮಿಸಿದ ಶಿಂಗಟಾಲೂರ ಏತ ನೀರಾವರಿ ಯೋಜನೆ ವಿಭಾಗ-02ರ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರ ಎಚ್.ಸಿ. ಹಾಗೂ ಸಹಾಯಕ ಅಭಿಯಂತರರಾದ ಬಸವರಾಜ ಗಡಾದ ಅವರನ್ನು ರೈತರು ತಡೆದು ಪ್ರಶ್ನೆಗೊಳಪಡಿಸಿದರು. ಅಧಿಕಾರಿಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, “ನೀರಿಗೆ ಶಾಶ್ವತ ಪರಿಹಾರ ನೀಡುವವರೆಗೂ ನಿಮಗೆ ಬಿಡುವುದಿಲ್ಲ” ಎಂದು ಪಟ್ಟು ಹಿಡಿದರು.
ನಂತರ ಅಧಿಕಾರಿಗಳು ರೈತರ ಬೇಡಿಕೆಗಳನ್ನು ಆಲಿಸಿ, ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಶೀಘ್ರ ವರದಿ ಸಲ್ಲಿಸುವುದಾಗಿ ಅಧಿಕಾರಿಗಳು ರೈತರಿಗೆ ತಿಳಿಸಿದರು.
ಈ ವೇಳೆ ಸಾಮಾಜಿಕ ಕಾರ್ಯಕರ್ತರಾದ ಮಂಜಯ್ಯಸ್ವಾಮಿ ಅರವಟಗಿಮಠ, ಪರಶುರಾಮ ಮರಡಿ, ಕೆ.ಜಿ. ಕಲ್ಲನಗೌಡ, ಶಾಂತಪ್ಪ ಬರಗಲ್ಲ, ಮಲ್ಲಪ್ಪ ಮಠದ, ರೇವಣಶಿದ್ದಪ್ಪ ಮಠದ, ಬಾಕ್ಷಿಸಾಬ ತಾಂಬೋಟಿ, ರಹಿಮನ್ ಸಾಬ ತಾಂಬೋಟಿ, ಲಕ್ಷ್ಮಣ ಮರಡಿ, ನಾಗಪ್ಪ ಅಬ್ಬಿಗೇರಿ, ವಿರುಪಾಕ್ಷಯ್ಯ ಮುತ್ತಾಳಮಠ, ವೀರಯ್ಯ ಮುತ್ತಾಳಮಠ, ಅಬ್ದುಲರಜಾಕಸಾಬ ತಾಂಬೋಟಿ ಸೇರಿದಂತೆ ಅನೇಕ ರೈತರು ಮತ್ತು ಗ್ರಾಮಸ್ಥರು ತಮ್ಮ ಧ್ವನಿಯನ್ನು ಎತ್ತಿದರು.
ರೈತರ ಆಕ್ರೋಶವನ್ನು ಗಮನಿಸಿದರೆ, ಇನ್ನು ಮುಂದೆಯಾದರೂ ಸರ್ಕಾರ ಹಾಗೂ ಇಲಾಖೆಯವರು ತ್ವರಿತ ಕ್ರಮ ಕೈಗೊಂಡು ರೈತರ ಕೃಷಿಭೂಮಿಗಳಿಗೆ ಶಾಶ್ವತ ಪರಿಹಾರ ಒದಗಿಸುವುದು ಅತ್ಯಂತ ಅಗತ್ಯವಾಗಿದೆ. ಇಲ್ಲದಿದ್ದರೆ ರೈತರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.