ಗದಗ: ಗದಗ ತಾಲೂಕಿನ ಹೊಸೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ಸಿಲಿಂಡರ್ ಸ್ಫೋಟದ ದಾರುಣ ಘಟನೆ ಸಂಭವಿಸಿದೆ. ಈ ಅವಘಡದಲ್ಲಿ 14 ವರ್ಷದ ಶರಣಪ್ಪ ಹಾಲೀನ್ ಸೇರಿ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯ ವಿವರ:
ಹೊಸೂರು ಗ್ರಾಮದ ನಿವಾಸಿ ಬಸಪ್ಪ ಆದಿವರ ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅನಾಹುತ ಸಂಭವಿಸಿದೆ. ಸಿಲಿಂಡರ್ನಿಂದ ಗ್ಯಾಸ್ ಸೋರಿಕೆ ಆಗುತ್ತಿರುವ ಬಗ್ಗೆ ಶಂಕೆ ಬಂದ ತಕ್ಷಣ, ಪಕ್ಕದ ಮನೆಯವರು ಕೂಡಲೇ ಜಮಾವಣೆಗೊಂಡರು. ಮನೆ ಬೀಗವನ್ನು ಒಡೆದು ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸಿಲಿಂಡರ್ ಭಾರೀ ಸ್ಫೋಟಗೊಂಡಿದೆ.

ಗಾಯಾಳುಗಳ ಮಾಹಿತಿ:
ಸ್ಫೋಟದ ಪರಿಣಾಮ ಶರಣಪ್ಪ ಹಾಲೀನ್ (14), ಲಕ್ಷ್ಮವ್ವ ಕಣವಿ, ಬಸವಣೆವ್ವ ಹೊರಪೇಟಿ, ಮಂಜುಳಾ, ಮತ್ತು ನಿರ್ಮಲಾ ಸೇರಿದಂತೆ ಆರು ಮಂದಿಗೆ ಗಾಯಗಳಾಗಿವೆ.
ಸಮಯಕ್ಕೆ ಬರಲಿಲ್ಲ ಆ್ಯಂಬುಲೆನ್ಸ್, ಗ್ರಾಮಸ್ಥರ ಆಕ್ರೋಶ:
ಸ್ಫೋಟದ ಬಳಿಕ ಸಂಬಂಧಿಕರು ಮತ್ತು ಸ್ಥಳೀಯರು ಕೂಡಲೇ ಆ್ಯಂಬುಲೆನ್ಸ್ ಗೆ ಕರೆ ಮಾಡಿದರು. ಆದರೆ ಆ್ಯಂಬುಲೆನ್ಸ್ ಸಮಯಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. “ಎಷ್ಟೇ ಬಾರಿ ಕರೆ ಮಾಡಿದರೂ ಆ್ಯಂಬುಲೆನ್ಸ್ ಸಮಯಕ್ಕೆ ಬಂದಿಲ್ಲ. ಕೊನೆಗೆ ಬೈಕ್ ಮತ್ತು ಖಾಸಗಿ ವಾಹನಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು” ಎಂದು ಸ್ಥಳೀಯರು ಆಕ್ರೋಶಗೊಂಡಿದ್ದಾರೆ.
ಪೊಲೀಸರು ಸ್ಥಳ ಪರಿಶೀಲನೆ:
ಸಮಾಚಾರ ತಿಳಿದ ಕೂಡಲೇ ಮುಳಗುಂದ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಾರಂಭವಾಗಿದ್ದು, ಸಿಲಿಂಡರ್ ಸ್ಫೋಟಕ್ಕೆ ಗ್ಯಾಸ್ ಸೋರಿಕೆಯೇ ಕಾರಣ ಎನ್ನಲಾಗಿದೆ.
ಸ್ಥಳೀಯರ ಮನವಿ:
ಸ್ಥಳೀಯರು ಇಂತಹ ಅನಾಹುತಗಳು ಪುನರಾವೃತ್ತಿಯಾಗದಂತೆ ಅಗ್ನಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಆ್ಯಂಬುಲೆನ್ಸ್ ಸೇವೆ ಸಮಯಕ್ಕೆ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೂಡ ಆಗ್ರಹಿಸಿದ್ದಾರೆ.