ಗದಗ: ಕಡಲೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ರೈತರು ಗದಗನ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ.ಗದಗ ಜಿಲ್ಲೆಯ 450 ಕ್ಕೂ ಹೆಚ್ಚು ರೈತರಿಗೆ ಮಧ್ಯವರ್ತಿ ಹಣ ನೀಡದೆ ಮೋಸ ಮಾಡಿರೋ ವಿಚಾರಕ್ಕೆ ರೈತರು ಅಹೋರಾತ್ರಿ ಪ್ರತಿಭಟನೆಗೆ ಇಳಿದಿದ್ದಾರೆ.
ದಾವಣಗೆರೆ ಜಿಲ್ಲೆ ಬನ್ನಿಕೋಡ ಮೂಲದ ವ್ಯಾಪಾರಿ ಮಾರುತಿ ಎಂಬಾತನಿಂದ ರೈತರಿಗೆ ವಂಚನೆಯಾಗಿದ್ದು, ಕಳೆದ ವರ್ಷ ಕಡಲೆ ಖರೀದಿಸಿ 6 ಕೋಟಿ 50 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾನೆ.
ಅಲ್ಲದೇ ಸಂಜೀವಿನಿ ಒಕ್ಕೂಟದ ಮಧ್ಯಸ್ಥಿಕೆಯಲ್ಲೇ ಈ ವ್ಯಾಪಾರ ನಡೆದಿದ್ದು, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಂದಲೇ ವ್ಯಾಪಾರಿಗಳನ್ನ ಗುರುತಿಸಲಾಗಿದೆ. ಹೀಗಾಗಿ ಜಿಲ್ಲಾ ಪಂಚಾಯ್ತಿ, ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲೇ ಹಣ ಪಾವತಿಯಾಗಬೇಕು ಎಂದು ಪಟ್ಟು ಹಿಡಿದಿದ್ದು, ಹಣ ಬಿಡುಗಡೆಗೆ ಆಗ್ರಹಿಸಿ ಡಿಸಿ ಕಚೇರಿ ಎದುರು ಧರಣಿ ನಡೆಸಲಾಗ್ತಿದೆ.
ನಿನ್ನೆ ರಾತ್ರಿ ಡಿಸಿ ಕಚೇರಿ ಅಂಗಳದಲ್ಲೇ ಅಡುಗೆ ಮಾಡಿ ರೈತರು ಊಟ ಮಾಡಿದ್ದಾರೆ. ಗದಗ, ಮುಂಡರಗಿ ತಾಲೂಕಿನ 450 ಕ್ಕೂ ಹೆಚ್ಚು ರೈತರಿಗೆ ಹಣ ಪಾವತಿಸದೆ ವ್ಯಾಪಾರಿ ಸತಾಯಿಸುತ್ತಿದ್ದು, ಕಳೆದ ವರ್ಷ ಹಿಂಗಾರಿ ಹಂಗಾಮಿನಲ್ಲಿ 370 ಟನ್ ಕಡಲೆ ಮಾರಾಟವಾಗಿದ್ದು, 27 ಕೋಟಿ ರೂಪಾಯಿ ವಹಿವಾಟಾಗಿದ್ದು, ಆರಂಭಿಕವಾಗಿ 20 ಕೋಟಿ ರೂಪಾಯಿ ಪಾವತಿಸಲಾಗಿದೆ.
ಆದರೆ 6 ಕೋಟಿ 50 ಲಕ್ಷ ರೂಪಾಯಿ ಹಣವನ್ನ ವ್ಯಾಪಾರಿ ಮಾರುತಿಗೌಡ ಬಾಕಿ ಉಳಿಸಿಕೊಂಡಿದ್ದಾನೆ. ವರ್ಷಗಳಿಂದ ಹಣ ಪಾವತಿಸದೇ ಸತಾಯಿಸುತ್ತಿರುವ ವ್ಯಾಪಾರಿ ವಂಚನೆ ವಿರುದ್ಧ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.