ಬೆಂಗಳೂರು: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ, ವರ್ಗಾವಣೆ, ಪ್ರಮೋಷನ್ಗೆ ಸನ್ನದುದಾರರಿಂದ ಲಂಚ ಸ್ವೀಕರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಮದ್ಯ ಮಾರಾಟಗಾರರು ನವೆಂಬರ್ 20ರಂದು ರಾಜ್ಯಾದ್ಯಂತ ನಡೆಸಲು ಉದ್ದೇಶಿಸಿದ್ದರು. ಇಂದು ನೆಡೆದ ಮುಖ್ಯ ಮಂತ್ರಿಗಳ ಜೊತೆಗಿನ ಸಭೆ ಯಶಸ್ವಿಯಾಗಿದ್ದು, ನಾಳೆ ಮದ್ಯ ಮಾರಾಟ ಎಂದಿನಂತೆಯೇ ಇರಲಿದೆ.
ಗೃಹ ಕಚೇರಿ ಕೃಷ್ಣದಲ್ಲಿ ಮದ್ಯ ಮಾರಾಟಗಾರರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿ, ಮದ್ಯ ಮಾರಾಟಗಾರರ ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಮತ್ತು ಮಾರಾಟಗಾರರಿಗು ಮತ್ತು ಸರ್ಕಾರಕ್ಕು ಆದಾಯ ಬರುವಂತೆ ಯೋಜನೆ ರೂಪಿಸಲಾಗುವುದು ಜೊತೆಗೆ ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡದಂತೆ ಅಬಕಾರಿ ಆಯುಕ್ತರಿಗೆ ಸೂಚನೆ ನೀಡಲಾಗುವುದು ಎಂದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಪಾಲರಿಗೆ ಮದ್ಯ ಮಾರಾಟಗಾರರ ಸಂಘ ದೂರು ಕೊಟ್ಟಿಲ್ಲ. ಈ ಬಗ್ಗೆ ಸುಳ್ಳು ಪ್ರಚಾರ ಮಾಡಲಾಗಿದೆ. ದೂರು ಕೊಟ್ಟವರಿಗೂ ನಮಗೂ ಸಂಬಂಧವೇ ಇಲ್ಲ. ಈ ಬಗ್ಗೆ ಬೇಕಿದ್ದರೆ ತನಿಖೆ ನಡೆಸಿ ಎಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಒಕ್ಕೊರಳಿನಿಂದ ಸ್ಪಷ್ಟಪಡಿಸಿದ್ದಾರೆ.