ಲಕ್ಷ್ಮೇಶ್ವರ, ಆಗಸ್ಟ್ 7: ಮೈಗೆ ಮಲ ಬಳಿದುಕೊಂಡು ಕಾರ್ಮಿಕನೋರ್ವ ತನ್ನ ಆಕ್ರೋಶ ಹೊರಹಾಕಿರುವ ಘಟನೆ ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಎದುರು ಜರುಗಿದೆ.
ಬುಧವಾರ ಬೆಳಿಗ್ಗೆ ಈ ಅಮಾನಾವೀಯ ಘಟನೆ ಸಂಭವಿಸಿದ್ದು, ಸ್ಥಳಿಯ ಜನರಲ್ಲಿ ಆಘಾತ ಮೂಡಿಸಿದೆ. ಅಲ್ಲದೇ ಪೌರಕಾರ್ಮಿಕರ ನೇಮಕಾತಿ ಕುರಿತು ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ. ಹಲವು ವರ್ಷಗಳಿಂದ ಪುರಸಭೆಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ಸಫಾಯಿ ಕರ್ಮಚಾರಿಯಾಗಿ ಸೇವೆ ನೀಡುತ್ತಿದ್ದ ಸುರೇಶ ಬಸವನಾಯ್ಕರ್ ಎಂಬಾತ, ತನ್ನ ಮಗನಿಗೆ ಪೌರಕಾರ್ಮಿಕನ ಸ್ಥಾನ ನೀಡುವಂತೆ ಆಗ್ರಹಿಸಿ ಮೈಗೆ ಮಲ ಬಳಿದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಸಂಭವಿಸಿದೆ.
ಸುರೇಶ ಬಸವನಾಯ್ಕರ್ ಕಳೆದ ಹಲವಾರು ವರ್ಷಗಳಿಂದ ಪುರಸಭೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಖಾಯಂ ನೌಕರಿಯ ಭರವಸೆ ಇಲ್ಲದ ಪರಿಸ್ಥಿತಿಯಲ್ಲಿ, ಇದೀಗ ತನ್ನ ಮಗನಿಗಾದರೂ ಗುತ್ತಿಗೆ ಆಧಾರದ ಮೇಲೆ ಅವಕಾಶ ನೀಡಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದರೂ, ಯಾವುದೇ ಸ್ಪಂದನೆ ದೊರಕಲಿಲ್ಲ ಎಂದು ಆರೋಪಿಸಿದ್ದಾನೆ.
ಇತ್ತೀಚೆಗೆ ಪುರಸಭೆ ಆಡಳಿತ ಮಂಡಳಿಯಿಂದ ಸುಮಾರು 10 ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಈ ನೇಮಕಾತಿಯಲ್ಲಿಯೂ ತನ್ನ ಮಗನಿಗೆ ಅವಕಾಶ ದೊರಕದ ಕಾರಣದಿಂದ ತೀವ್ರ ನೀರಾಶೆಗೊಂಡ ಸುರೇಶ, ಇಂತಹ ವಿಚಿತ್ರ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾನೆ.
“ನಾನು ಸಹ ಹಲವಾರು ವರ್ಷಗಳ ಸೇವೆ ಮಾಡಿದ್ದೇನೆ. ಆದರೆ ಖಾಯಂ ಕೆಲಸ ಸಿಗಲಿಲ್ಲ. ಇವಾಗ ನನ್ನ ಮಗನಿಗಾದರೂ ಕೂಡಾ ಅವಕಾಶ ನೀಡಿಲ್ಲ. ಇದೇ ಕಾರಣದಿಂದಾಗಿ ನಾನು ಮೈಗೆ ಮಲ ಬಳಿದುಕೊಂಡು ಪ್ರತಿಭಟನೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಕೂಡಾ ಅಧಿಕಾರಿಗಳು ಸ್ಪಂದಿಸದಿದ್ದರೆ ಈ ರೀತಿಯ ಪ್ರತಿಭಟನೆ ಮುಂದುವರಿಸುವೆ” ಎಂದು ನಾಯ್ಕರ್ ಎಚ್ಚರಿಕೆ ನೀಡಿದ್ದಾನೆ.
ಪೊಲೀಸರು ಮಧ್ಯಪ್ರವೇಶ:
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸುರೇಶನನ್ನು ಮನವೊಲಿಸಿ ಪ್ರತಿಭಟನೆ ಸ್ಥಗಿತಗೊಳಿಸುವಂತೆ ಸಮಾಧಾನಪಡಿಸಿದರು. ಬಳಿಕ ಆತನನ್ನು ಮನೆಗೆ ಕಳುಹಿಸಿದ್ದಾರೆ.
ಸದ್ಯ ಈ ಘಟನೆ ಮೂಲಕ ಪೌರಕಾರ್ಮಿಕರ ನೇಮಕಾತಿಯಲ್ಲಿ ಪಾರದರ್ಶಕತೆ, ನ್ಯಾಯ ಹಾಗೂ ಮಾನವೀಯತೆಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತೆ ತಲೆದೋರಿದ್ದು, ಸಂಬಂಧಿಸಿದ ಅಧಿಕಾರಿಗಳ ಸ್ಪಂದನೆಗೆ ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.