ಗದಗ:ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನದ ಫಲವಾಗಿ ಇಂದು ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಮಹನೀಯರ ಸ್ಮರಣೆ ಮಾಡುವ ಈ ಪುಣ್ಯ ದಿನವೇ ಸ್ವಾತಂತ್ರ್ಯೋತ್ಸವ ಎಂದು ಮಾಡೆಲ್ ಹೈಸ್ಕೂಲ್ ಕಾರ್ಯದರ್ಶಿಗಳಾದ ವೀರನಗೌಡ ಎ. ಪಾಟೀಲ ಅವರು ತಿಳಿಸಿದರು.
ನಗರದ ಚಿಕ್ಕಟ್ಟಿ ಶಾಲಾ-ಕಾಲೇಜು ಹಾಗೂ ಕಲರ್ಸ್ ಕನ್ನಡ ಟಿವಿ ವಾಹಿನಿಯ ಸಹಯೋಗದಲ್ಲಿ ಚಿಕ್ಕಟ್ಟಿ ಶಾಲಾ ಪ್ರಾಂಗಣದಲ್ಲಿ ಅದ್ದೂರಿಯಾಗಿ ೭೯ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿತು. ಧ್ವಜಾರೋಹಣ ಮಾಡಿದ ನಂತರ ಮಾತನಾಡಿದ ವೀರನಗೌಡ ಪಾಟೀಲ ಅವರು, ಸ್ವಾತಂತ್ರ್ಯವನ್ನು ಪಡೆಯಲು ತಮ್ಮ ಜೀವನವನ್ನೇ ಬಲಿದಾನ ಮಾಡಿದ ಶೂರ ಹೋರಾಟಗಾರರನ್ನು ಈ ದಿನ ನೆನೆಯುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಚೈತ್ರಾ ಕುಂದಾಪುರ ಅವರ ಪ್ರೇರಣಾದಾಯಕ ಮಾತು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಕಲರ್ಸ್ ಕನ್ನಡ ವಾಹಿನಿ ವತಿಯಿಂದ ಆಗಮಿಸಿದ್ದ ಚೈತ್ರಾ ಕುಂದಾಪುರ ಅವರು ಭಾಗವಹಿಸಿ ಮಾತನಾಡುತ್ತಾ, ಘಟಪ್ರಭಾ–ಮಲಪ್ರಭಾ ನದಿಗಳ ನಡುಗಟ್ಟಿನಲ್ಲಿ ನಿಂತ ಅಕ್ಷರ ಕ್ರಾಂತಿಯ ಕಿಚ್ಚು ಹಚ್ಚಿದ ಗದಗ ನಗರದಲ್ಲಿ ೭೯ನೇ ಸ್ವಾತಂತ್ರ್ಯೋತ್ಸವ ಆಚರಿಸುವುದು ಸಂತಸ ತಂದಿದೆ ಎಂದರು.
“ಈ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾತ್ರವಲ್ಲ, ಬದುಕಿಗೆ ಅವಶ್ಯಕವಾಗಿರುವ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನೂ ಕಲಿಸುತ್ತಿದೆ. ಇಂದಿನ ಮಕ್ಕಳು ಇನ್ನು ೨೧ ವರ್ಷಗಳ ನಂತರ ೧೦೦ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ವೇದಿಕೆಯ ಮೇಲೆ ಕುಳಿತಿರುವ ಮುಖಂಡರಾಗುತ್ತಾರೆ. ಇದು ಅವರ ಸಾಧನೆಯೊಂದಿಗೆ ಬದುಕಿನ ಬದಲಾವಣೆ. ಆಗ ಈ ಸಂಸ್ಥೆಯಲ್ಲಿ ಓದಿದ್ದಕ್ಕಾಗಿ ಹೆಮ್ಮೆ ಪಡುವಿರಿ,” ಎಂದು ಹೇಳಿದರು.
ಗದಗಿನ ಸ್ವಾತಂತ್ರ್ಯ ಹೋರಾಟದ ನೆನಪು
ಗದುಗಿನ ನೆಲದಲ್ಲಿ ಅನೇಕರ ಹೋರಾಟದ ತ್ಯಾಗ ಅಡಗಿದೆ. ಮುಂಡರಗಿಯ ಭೀಮರಾಯರು ಬ್ರಿಟೀಷರಿಗೆ ಭಯ ಹುಟ್ಟಿಸಿದ ಶೂರ ಹೋರಾಟಗಾರರೆಂದು ಸ್ಮರಿಸಿದರು. ಗದಗ ಜಿಲ್ಲೆಯ ೧೨ ವರ್ಷದ ಪುಟ್ಟ ಬಾಲಕ ನಿಜಲಿಂಗಪ್ಪ ಪೂಜಾರ ೧೯೩೪ರಲ್ಲಿ ಗಾಂಧೀಜಿಯವರ ಭಾಷಣದಿಂದ ಪ್ರೇರಿತರಾಗಿ ಬ್ರಿಟೀಷರ ಶಸ್ತ್ರಾಸ್ತ್ರಗಳನ್ನು ಕದ್ದುಕೊಂಡು ತನ್ನ ಹೊಲದಲ್ಲಿ ಮುಚ್ಚಿಟ್ಟಿದ್ದ ಘಟನೆ ಉಲ್ಲೇಖಿಸಲಾಯಿತು. ಅದೇ ವೇಳೆ ಬ್ರಿಟೀಷರು ಹಿಡಿದು ಹಿಂಸಾತ್ಮಕವಾಗಿ ಬಡಿದರೂ ಬಾಯಿ ಬಿಡದ ಆ ಬಾಲಕನ ಧೈರ್ಯವನ್ನು ಮೆಚ್ಚಲೇಬೇಕು. ಬಾಲಕನ ತಾಯಿ ಚನ್ನಬಸಮ್ಮ ಕೂಡಾ ಮಗನ ದೇಶಭಕ್ತಿ ಕಾರ್ಯವನ್ನು ಹೆಮ್ಮೆಪಟ್ಟು ಖಾದಿ ಬಟ್ಟೆ ತಂದು ಕೊಟ್ಟು ಜೈಲಿಗೆ ಕಳುಹಿಸಿದ್ದ ಹೃದಯಸ್ಪರ್ಶಿ ಘಟನೆ ನೆನಪಿಸಲಾಯಿತು.

ಅಷ್ಟೇ ಅಲ್ಲದೆ, ಗದಗದ ನಾಡು ರಾಷ್ಟ್ರಕವಿ, ಸಂಗೀತ ಸಾಧಕರ ನಾಡು ಎಂದು ಹೆಸರಾಗಿದ್ದು, ‘ಭಾರತ ರತ್ನ’ ಪುರಸ್ಕೃತ ಪಂಡಿತ ಭೀಮಸೇನ ಜೋಷಿ ಹಾಗೂ ನಡೆದಾಡುವ ದೇವರೆಂದು ಕರೆಯಲ್ಪಟ್ಟ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳಂತಹ ಮಹನೀಯರನ್ನು ನೆನಪಿಸಿಕೊಂಡರು. “ನಮ್ಮ ಮಕ್ಕಳು ಊರಿನ ಮಹತ್ವ, ದೇಶದ ಹೆಮ್ಮೆ ತಿಳಿದಾಗ ಮಾತ್ರ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಾರ್ಥಕತೆ ಸಿಗುತ್ತದೆ,” ಎಂದರು.
ಸಂಸ್ಥೆಯ ಅಧ್ಯಕ್ಷರ ನುಡಿ
ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್.ವಾಯ್. ಚಿಕ್ಕಟ್ಟಿ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ವಿಶೇಷವಾಗಿ ಆಗಮಿಸಿದ ಅತಿಥಿಗಳಿಗೆ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೃತಜ್ಞತೆ ಸಲ್ಲಿಸಿದರು. ವೀರನಗೌಡ ಪಾಟೀಲರ ದೊಡ್ಡಪ್ಪರಾದ ಸಿ.ಎಸ್. ಪಾಟೀಲರ ಸಹಕಾರವನ್ನು ನೆನಪಿಸಿಕೊಂಡರು. ಮುಖ್ಯ ಅತಿಥಿ ಚೈತ್ರಾ ಕುಂದಾಪುರ ಅವರು ಒಳ್ಳೆಯ ಭಾಷಣಕಾರರಾಗಿದ್ದು, ಮಕ್ಕಳಿಗೆ ಪ್ರೇರಣೆಯಾದ ಮಾತುಗಳನ್ನು ನೀಡಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಪಥ ಸಂಚಲನ ಮತ್ತು ಸನ್ಮಾನ
ಧ್ವಜಾರೋಹಣದ ನಂತರ ಪ್ರೌಢಶಾಲಾ ಮಕ್ಕಳು ಪಥ ಸಂಚಲನ ಮಾಡಿ ಗಣ್ಯರಿಗೆ ಗೌರವ ಸಲ್ಲಿಸಿದರು. ವೀರನಗೌಡ ಎ. ಪಾಟೀಲ ಹಾಗೂ ಅವರ ಪತ್ನಿ ಗಿರಿಜಾ ಪಾಟೀಲ ದಂಪತಿ, ಚೈತ್ರಾ ಕುಂದಾಪುರ–ಶ್ರೀಕಾಂತ ಕಶ್ಯಪ ದಂಪತಿ, ಮಾಜಿ ಸೈನಿಕ ಮಂಗಳೇಶ ವಸ್ತ್ರದ, ಉಪಪ್ರಾಚಾರ್ಯೆ ಶೋಭಾ ಸ್ಥಾವರಮಠ ಅವರ ಪುತ್ರಿ ಹಾಗೂ ಎನ್‌ಸಿಸಿ ಕೆಡೆಟ್ ಇಂಚರಾ ಟಿ.ಹೆಚ್.ಎಂ. ಇವರನ್ನು ಚಿಕ್ಕಟ್ಟಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಚಿತ್ರಕಲಾ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರದಾನ
ಕಲರ್ಸ್ ಕನ್ನಡ ವಾಹಿನಿಯ ವತಿಯಿಂದ ಆಗಸ್ಟ್ ೧೩ರಂದು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಲ್ಲಿ ಪ್ರಥಮ ಸ್ಥಾನ ಅದಿತಿ ಜಿ. ಗುಗ್ಗರಿ (೧೦ನೇ ತರಗತಿ), ದ್ವಿತೀಯ ಸ್ಥಾನ ಮನೀಶಾ ಚಲವಾದಿ ಹಾಗೂ ತೃತೀಯ ಸ್ಥಾನ ಇಫಾ ತಕ್ಕಲಕೋಟಿ ಪಡೆದು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ಸ್ವೀಕರಿಸಿದರು.
ವೇದಿಕೆ ಅಲಂಕರಿಸಿದ ಗಣ್ಯರು
ವೇದಿಕೆಯ ಮೇಲೆ ಗದಗ ನಟರಂಗ ಕಲಾ ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಚಿಕ್ಕಮಠ, ಉದ್ಯಮಿ ವಿಜಯಕುಮಾರ ಹಿರೇಮಠ–ಸ್ನೇಹಾ ಹಿರೇಮಠ, ರೇಷ್ಮೆ ಉದ್ಯಮಿ ಬಲರಾಮ ಬಸವಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಚಟುವಟಿಕೆಗಳು
ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕಿ ರಜನಿ ಕುರಿ ಸ್ವಾಗತಿಸಿದರು. ೯ನೇ ತರಗತಿಯ ಶ್ರೇಯಾ ಮುಳಗುಂದಮಠ ಹಾಗೂ ಸುಜನಾ ಪ್ರಸಾರ ಅತಿಥಿಗಳ ಪರಿಚಯ ಮಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಮಾಹೀರಾ ಹೆಸರೂರು ಮತ್ತು ಉಮ್ಮೇರುಮಾನ ಶಿರಹಟ್ಟಿ ನಿರೂಪಣೆ ಮಾಡಿದರು. ಕನ್ನಡ ಉಪನ್ಯಾಸಕ ಶ್ರೀಶೈಲ ಬಡಿಗೇರ ವಂದನಾರ್ಪಣೆ ಸಲ್ಲಿಸಿದರು. ಬಳಿಕ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.