ಗದಗ: ವಿದ್ಯಾಭ್ಯಾಸದ ಜೊತೆಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಪ್ಯಾರಾಮೌಂಟ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಡಾ. ಗುರುಸಿದ್ಧೇಶ ಯು. ಎಮ್. ಹೇಳಿದರು.
ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜಿನ 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು, ಅದು ನಾವು ಮಾಡುವ ಕೆಲಸದೊಂದಿಗೆ ಗೌರವವನ್ನು ಹೆಚ್ಚಿಸುತ್ತದೆ. ಯಾರು ಪ್ರಾಮಾಣಿಕತೆಗೆ ಬದ್ಧರಾಗಿ ನಡೆದುಕೊಳ್ಳುತ್ತಾರೋ ಅವರನ್ನು ಸಮಾಜ ಗೌರವಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯರಾದ ಬೆಂಗಳೂರಿನ ವಿವೇಕಾನಂದ ಪಿಯು ಕಾಲೇಜಿನ ಶ್ರೀಧರಮೂರ್ತಿ ಅವರು ಮಾತನಾಡಿ, ಉಪನ್ಯಾಸಕರು ಕೇಳುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸುವ ಪ್ರಯತ್ನ ಮಾಡಬೇಕು. ಓದು ಬರಹ ಮಾಡುವಾಗ ಏಕಾಗ್ರತೆ, ಶ್ರದ್ಧೆಯಿಂದ, ತದೇಕಚಿತ್ತರಾಗಿ ಕುಳಿತು ಅಭ್ಯಾಸ ಮಾಡಬೇಕು. ದ್ವಿತೀಯ ಪಿ.ಯು.ಸಿ ನಂತರ ಸಿ.ಇ.ಟಿ ಗೆ ತಾವುಗಳು ಸಿದ್ಧರಾಗಬೇಕಾಗುತ್ತದೆ.
ಸಿ.ಇ.ಟಿ. ಪ್ರಶ್ನೆಪತ್ರಿಕೆಗಳು ನೀವು ಅಂದುಕೊಂಡಷ್ಟು ಸರಳವಾಗಿರುವುದಿಲ್ಲ, ಇಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯ ವಿಷಯಗಳನ್ನೊಳಗೊಂಡಿರುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿದಾಗ ಅದರಲ್ಲಿ ಸ್ವಲ್ಪ ಸರಳ, ಸ್ವಲ್ಪ ಕಠಿಣ ಮತ್ತು ಅತಿ ಕಠಿಣ ರೀತಿಯಲ್ಲಿರುತ್ತವೆ. ಸತತ ಅಭ್ಯಾಸ ಮಾಡಿದವರಿಗೆ ಸರಳ ಎನಿಸುತ್ತವೆ. ಒಟ್ಟಾರೆಯಾಗಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯನ್ನು ಚೆನ್ನಾಗಿ ಬರೆದು ಅತ್ಯುತ್ತಮ ಅಂಕ ಪಡೆದು ಕಲಿತ ಕಾಲೇಜಿಗೆ ಮತ್ತು ತಂದೆ ತಾಯಿಗಳಿಗೆ ಕೀರ್ತಿಯನ್ನು ತಂದುಕೊಡುವಂತಾಗಿರಿ ಎಂದು ಶುಭಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸತತ ಅಭ್ಯಾಸ ಮಾಡಿ ವಾರ್ಷಿಕ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಉತ್ತಮವಾದ ಅಂಕಗಳನ್ನು ಗಳಿಸಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯರಾದ ಶ್ರೀಧರಮೂರ್ತಿ ಎಚ್. ಎಮ್. ಮತ್ತು ಡಾ. ಗುರುಸಿದ್ಧೇಶ ಯು. ಎಮ್. ಹಾಗೂ ಅತಿಥಿಗಳಾಗಿ ಆಗಮಿಸಿದ ಪ್ರಶಾಂತ ಎಸ್. ಚಿಕ್ಕಟ್ಟಿ ಮತ್ತು ಅವರ ಧರ್ಮಪತ್ನಿಯಾದ ಸಾವಿತ್ರಿ ಪಿ. ಚಿಕ್ಕಟ್ಟಿಯವರನ್ನು ಚಿಕ್ಕಟ್ಟಿ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವಿನಯ್ ಚಿಕ್ಕಟ್ಟಿ ಪಿ.ಯು. ಕಾಲೇಜಿನ ಪ್ರಾಚಾರ್ಯರಾದ ವಿನಯ್ ಎಸ್. ಚಿಕ್ಕಟ್ಟಿಯವರು ಸ್ವಾಗತಿಸಿದರು.
ಶಿಕ್ಷಕಿಯರಾದ ಪ್ರಿಯಾಂಕಾ ಬಿದರೂರ ಪ್ರಾರ್ಥನಾ ಗೀತೆಯನ್ನು ಸಾದರಪಡಿಸಿದರು. ಕುಮಾರಿ ರಕ್ಷೀತಾ, ಮಾಹೇರಾ ಈರ್ಷಾದ್ ಮತ್ತು ಪ್ರತಿಭಾ ಎಮ್. ಮುಖ್ಯ ಅತಿಥಿಗಳನ್ನು ಪರಿಚಯಿಸಿದರೆ, ಬಿ.ಸಿ.ಎ. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಿಪಿನ್ ಎಸ್. ಚಿಕ್ಕಟ್ಟಿಯವರು ವಂದನಾರ್ಪಣೆಗೈದರು.