ಗದಗ: ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 13 ರಂದು ಗದಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಕಾರ್ಯಕ್ರಮದ ವಿವರ ಹೀಗಿದೆ:
ಡಿಸೆಂಬರ್ 13 ರಂದು ಬೆಳಿಗ್ಗೆ 10.20 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಸಿಎಂ ಹೊರಡಲಿದ್ದಾರೆ. ನಂತರ ಬೆಳಿಗ್ಗೆ 11.15 ಗಂಟೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಶ್ರೀ ಉಮಾ ಪಿ.ಯು ಕಾಲೇಜ್ ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಚಂದನ ಎಜ್ಯುಕೇಶನ್ ಸೊಸೈಟಿ ವತಿಯಿಂದ ಆಯೋಜಿಸಲಾಗಿರುವ “ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್” 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮ–2025’ ರಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಿ.ಎಸ್. ಪಾಟೀಲ (ಭಾ.ಆ.ಸೇ ನಿವೃತ್ತ) ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಚಂದನ ಶ್ರೀ’ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿರಲಿದ್ದಾರೆ.
ಕಾರ್ಯಕ್ರಮದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಜಿಲ್ಲಾಭಿವೃದ್ಧಿ, ಸಾರ್ವಜನಿಕ ಯೋಜನೆಗಳು, ಬಜೆಟ್ ಅನುಷ್ಠಾನ ಹಾಗೂ ನಾಗರಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಧ್ಯಾಹ್ನ 3.00 ಗಂಟೆಗೆ ಲಕ್ಷ್ಮೇಶ್ವರದ ಉಮಾ ಪಿ.ಯು. ಕಾಲೇಜ್ ಮೈದಾನ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಮರಳಿ ಹುಬ್ಬಳ್ಳಿ ವಿಮಾನ ನಿಲ್ದಾಣದತ್ತ ಸಿಎಂ ಪ್ರಯಾಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
