ಈ ವರ್ಷದ ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇಯ ಉದ್ಘಾಟನೆಯು ತಮಿಳುನಾಡು ವಿಭಾಗದ ಪ್ರಮುಖ ಭಾಗವು ನಿರ್ಮಾಣವಾಗದ ಕಾರಣ ವಿಳಂಬವಾಗಿದೆ. ಈ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 2024 ರ ಅಂತ್ಯದ ವೇಳೆಗೆ ಬಹುನಿರೀಕ್ಷಿತ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಘೋಷಿಸಿದ್ದರು.
72 ಕಿ.ಮೀ ಕರ್ನಾಟಕ ವಿಭಾಗ ಸಿದ್ಧವಾಗಿದ್ದರೆ, ಚೆನ್ನೈ ಬಳಿಯ ಇರುಂಗಟ್ಟುಕೊಟ್ಟೈನಿಂದ ತಮಿಳುನಾಡು-ಆಂಧ್ರಪ್ರದೇಶ ಗಡಿಯ ಗುಡಿಪಾಲದವರೆಗೆ ವಿಸ್ತರಿಸಿರುವ 106 ಕಿ.ಮೀ ತಮಿಳುನಾಡು ವಿಭಾಗವು ಸಂಪೂರ್ಣ ಭೂಸ್ವಾಧೀನದ ಹೊರತಾಗಿಯೂ ಮಂದಗತಿಯಲ್ಲಿ ಕಾಮಗಾರಿ ಸಾಗಿರುವುದರಿಂದ ಈ ಭಾಗವನ್ನು ಈಗ 2025 ರ ಮಧ್ಯದ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ.
ಗಂಟೆಗೆ 120 ಕಿ.ಮೀ ವೇಗದಲ್ಲಿ ಮಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಈ ಚತುಷ್ಪಥ ಹೆದ್ದಾರಿ, ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಎರಡು ಗಂಟೆಗಳಿಗೆ ಇಳಿಸುವ ಗುರಿಯನ್ನು ಹೊಂದಿದೆ.