ಮುಂಡರಗಿ:ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರ ಗ್ರಾಮದ ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ ಶಾಖಾ ಮಠದ ಜಾತ್ರಾ ಮಹೋತ್ಸವ ಹಾಗೂ ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ 30ನೇ ಪುಣ್ಯ ಸ್ಮರಣೋತ್ಸವವು ಇದೇ ಡಿ.1 ರಿಂದ 3 ವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ಪಂ.ಶಿವಲಿಂಗಯ್ಯ ಶಾಸ್ತ್ರಿಗಳು ಹೇಳಿದರು.
ಈ ಕುರಿತು ಮುಂಡರಗಿಯ ನೀರಿಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿ ಏರ್ಪಡಿಸಿ ಅವರು ಮಾತನಾಡಿದರು.
ಡಿ.1 ರಂದು ಬೆಳಗ್ಗೆ 8 ಗಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಹಿರೇವಡ್ಡಟ್ಟಿಯ ಶ್ರೀ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸುವರು. ಸಂಜೆ 5 ಗಂಟೆಗೆ ರಥದ ಕಳಸ ಆಗಮನ, 6 ಗಂಟೆಗೆ ಲಘು ರಥೋತ್ಸವ, 7 ಗಂಟೆಗೆ 1008 ದೀಪೋತ್ಸವ ಜರುಗುತ್ತದೆ.
ಸಂಜೆ 7:30 ಗಂಟೆಗೆ ಭಕ್ತಹಿತ ಚಿಂತನ ಗೋಷ್ಠಿ, ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸುವರು. ಅಭಿನವ ಡಾ.ಕೊಟ್ಟೂರೇಶ್ವರ ಸ್ವಾಮೀಜಿ ದೀಪ ಬೆಳಗಿಸುವರು. ರಥಶಿಲ್ಪಿ ಶಂಕ್ರಣ್ಣ ದೇವಪ್ಪ ಬಡಿಗೇರ ಹಾಗೂ ಸಹೋದರರಿಗೆ ಸನ್ಮಾನ ಕಾರ್ಯಕ್ರಮ ನಡೆಯುವುದು.
ಡಿ.2 ರಂದು ಬೆಳಗ್ಗೆ 5 ಗಂಟೆಗೆ ಶ್ರೀ ಚನ್ನವೀರ ಶರಣರ ಗದ್ದುಗೆಗೆ ರುದ್ರಾಭಿಷೇಕ, 11 ಗಂಟೆಗೆ ಶ್ರೀ ಚನ್ನವೀರ ಶರಣರ 30 ನೇ ಪುಣ್ಯಸ್ಮರಣೋತ್ಸವ ಮತ್ತು ಸಾಮೂಹಿಕ ವಿವಾಹ ಕಲ್ಯಾಣೋತ್ಸವ, ಪುರಾಣ ಮಹಾಮಂಗಲ, ಶರಣ ಚಿಂತನ ಗೋಷ್ಠಿ ಹಾಗೂ 331ನೇ ಶಿವಾನುಭವ ನಡೆಯಲಿದೆ.
ಕೊಪ್ಪಳ ಗವಿಮಠದ ಶ್ರೀ ಜ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು,ಲಿಂಗನಾಯಕನಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿ, ಹರ್ಲಾಪುರದ ಅಭಿನವ ಡಾ. ಕೊಟ್ಟೂರೇಶ್ವರ ಸ್ವಾಮೀಜಿ, ಹೂವಿನಹಡಗಲಿಯ ಡಾ.ಹಿರಿಯ ಮರಿಶಾಂತವೀರ ಸ್ವಾಮೀಜಿ,ಗಡಿಗೌಡಗಾಂವದ ಡಾ.ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಬಳಗಾನೂರಿನ ಶಿವಶಾಂತವೀರ ಶರಣರು,ಕಣಗಿನಹಾಳದ ಧರ್ಮರಾಜ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ.
ಜಂತ್ಲಿ- ಶಿರೂರ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರು ಹಾಗೂ ಊರಿನ ಗುರುಹಿರಿಯರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಂಗಲ ನುಡಿಗಳನ್ನ ಸಿದ್ಧಾಪುರದ ಶಿವಲಿಂಗಯ್ಯ ಹಿರೆಮಠ, ಶರಣಕುಮಾರ ಹೂಗಾರ, ಮಹಾಂತೇಶ ಅವರಿಂದ ಸಂಗೀತ ಕಾರ್ಯಕ್ರಮ ನಡೆಯುವುದು.
ಇದೇ ವೇಳೆ ಶರಣರ ತುಲಾಭಾರ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಶ್ರೀ ಜ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ನೂತನ ಗಡ್ಡಿ ತೇರು ಲೋಕಾರ್ಪಣೆ ನಡೆಯಲಿದೆ.ಈ ವೇಳೆ ಅಭಿನವ ಬೂದೀಶ್ವರ ಸ್ವಾಮೀಜಿ, ಅಭಿನವ ಡಾ.ಕೊಟ್ಟೂರೇಶ್ವರ ಸ್ವಾಮೀಜಿ, ಶಿವಶಾಂತವೀರ ಶರಣರು ಸಮ್ಮುಖ ವಹಿಸುವರು.ಸಂಜೆ 7 ಗಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು,
ಡಿ. 3 ರಂದು ಸಂಜೆ 5 ಗಂಟೆಗೆ ಕಡಬಿನ ಕಾಳಗ ಹಾಗೂ ಶ್ರೀ ಶರಣರ ಬೆಳ್ಳಿಮೂರ್ತಿ ಉತ್ಸವ ನಡೆಯುವದು.ನಂತರ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರಿಂದ ಜನಪದ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಸಿಡಿಮದ್ದು ಸುಡುವ ಆಕರ್ಷಣೀಯ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಗೌರವಾಧ್ಯಕ್ಷರಾದ ವೆಂಕಟೇಶ್ ಕುಲಕರ್ಣಿ ಅಧ್ಯಕ್ಷರಾದ ಸುರೇಶ್ ಚಿಗರಿ, ಉಪಾಧ್ಯಕ್ಷರಾದ ಮಹದೇವಪ್ಪ ಧರಣಿ, ಹಾಗೂ ಹನುಮಂತ ಪೂಜಾರ, ಅಣ್ಣಪ್ಪ ಅಳವಂಡಿ,ಪರಶುರಾಮ ಹುಬ್ಬಳ್ಳಿ, ಶಿವಾನಂದ ಸಕ್ರಗೌಡ ಸೇರಿದಂತೆ ಅನೇಕರು ಇದ್ದರು.