ಗದಗ: ಕನಸು ನನಸಾಗಲು ಅವಿರತವಾದ ಪ್ರಯತ್ನ, ಶ್ರಮ ವಿಶೇಷವಾಗಿ ಇಂದಿನ ಯುವ ಜನಾಂಗಕ್ಕೆ ಅತಿ ಅವಶ್ಯವಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೆರಿಯವರು ಅಭಿಪ್ರಾಯ ಪಟ್ಟರು.
ಗದಗನ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 8 ನೇಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಮೊಬೈಲ್‌ನ ಹುಚ್ಚು ಗೀಳಿನಿಂದ ಹೊರಬಂದು, ಉತ್ತಮ ಶಿಕ್ಷಣ ಸಂಸ್ಕಾರ ಪಡೆದು ಸಮಾಜಕ್ಕೆ ಅಚ್ಚು ಮೆಚ್ಚಿನ ನಾಗರಿಕರಾಗಿರಿ ಎಂದು ಕರೆ ನೀಡಿದರು.

ಕೃತು ಫರ್ಟಿಲಿಟಿ ಸೆಂಟರ್, ಗದಗನಿಂದ ಆಗಮಿಸಿದ ಮತ್ತೋರ್ವ ಅತಿಥಿ ಡಾ. ಅನುಪಮಾ ಪಾಟೀಲ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನಿಮ್ಮ ಅಧ್ಯಯನದಲ್ಲಿ ಆನಂದವಿರಲಿ. ಕಷ್ಟಪಟ್ಟು ಓದದೆ, ಇಷ್ಟಪಟ್ಟು ಓದಿರಿ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ಎಂಟು ವರ್ಷಗಳಲ್ಲಿ ಸಾಧಿಸಿದ ಪ್ರಗತಿ, ಸಾಧನೆ ಮೆಚ್ಚಿ, ಉಳಿದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಾಗಿದಾಗ ನಿಮ್ಮ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ. ಪ್ರೇಮಾನಂದ ರೋಣದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಾದ ನೀವು ಕೇವಲ ಅಂಕಗಳಿಕೆಗೆ ಸೀಮಿತಗೊಳ್ಳದೆ, ನಿಜವಾದ ಜ್ಞಾನಾರ್ಜನೆಗೆ ಹೆಚ್ಚಿನ ಮಹತ್ವ ನೀಡಿ ಸನ್ಮಾರ್ಗದಲ್ಲಿ ನಡೆದು ಸತ್ಪ್ರಜೆಗಳಾಗಿರಿ ಎಂದು ಅನೇಕಾನೇಕ ಪ್ರಸಂಗಗಳನ್ನು ಉದಾಹರಿಸುತ್ತಾ ವಿದ್ಯಾರ್ಥಿಗಳ ಮನ ತಣಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ, ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ಚೇರ್ಮನ್ ಪ್ರೋ. ರಾಜೇಶ ಕುಲಕರ್ಣಿರವರು ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡುವುದೇ ಈ ವಾರ್ಷಿಕೋತ್ಸವದ ಮುಖ್ಯ ಉದ್ದೇಶ.ಇದನ್ನು ನಮ್ಮ ಶಿಕ್ಷಣ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿರುವುದರ ಜೊತೆಗೆ, ಪಾಲಕರ, ಉಪನ್ಯಾಸಕರ ಸಹಾಯ ಸಹಕಾರದೊಂದಿಗೆ ನಮ್ಮ ಶಿಕ್ಷಣ ಸಂಸ್ಥೆ ಉತ್ತಮ ಹೆಸರನ್ನು ಗಳಿಸಿದೆ. ಈ ಕಾರ್ಯವನ್ನು ಮುಂದಿನ ದಿನಗಳಲ್ಲೂ ಮುಂದು ವರೆಸಿಕೊಂಡು ಹೋಗಲು ಉತ್ಸುಕರಾಗಿದ್ದೇವೆ. ಇದಕ್ಕೆ ವಿದ್ಯಾರ್ಥಿಗಳ ಪಾಲಕ ಪೋಷಕರ ಪ್ರೋತ್ಸಾಹ ತುಂಬಾ ಅವಶ್ಯವಿದೆ ಎಂದು ಆಶಿಸಿದರು.
ಸಂಸ್ಥೆಯ ನಿರ್ದೇಶಕ ಪ್ರೋ. ಪುನಿತ ದೇಶಪಾಂಡೆಯವರು ಸಂಸ್ಥೆಯು ಬೆಳೆದು ಬಂದ ಬಗೆಯನ್ನು ಸಭೆಗೆ ಎಳೆ ಎಳೆಯಾಗಿ ವಿವರಿಸಿದರು.
ಸಮಾರಂಭದ ಪ್ರಾರಂಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಕು. ಶ್ರೀನಿಧಿ ಪತ್ತಾರ ಹಾಗೂ ಕು. ಸಂಜನಾ ಕುರ್ತಕೋಟಿ ಇವರಿಂದ ಅಮೋಘ ಭರತ ನಾಟ್ಯ ಜರುಗಿದ ನಂತರ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಆಗಮಿಸಿದ ಅತಿಥಿಗಳಿಂದ ನಡೆಯಿತು.
ನಾಡಗೀತೆ, ಸ್ವಾಮಿ ವಿವೇಕಾನಂದರ ಜಯಂತಿ, ರಾಷ್ಟ್ರಗೀತೆ ಇವೆಲ್ಲವೂ ಸಮಾರಂಭದಲ್ಲಿ ವಿದ್ಯುಕ್ತವಾಗಿ ಜರುಗಿದವು ಅತಿಥಿಗಳ ಸ್ವಾಗತ, ಪರಿಚಯ ಪ್ರೊ. ಹೇಮಂತ ದಳವಾಯಿ ಮಾಡಿದರೆ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಎಮ್ ಸಿ ಹಿರೇಮಠ ಸರ್ವರನ್ನು ವಂದಿಸಿದರು.
ನಂತರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಮನಮೋಹಕ ಸಾಂಸ್ಕೃತಿಕ ಚಟುವಟಿಕೆ ಜರುಗಿದವು.
ಸಭೆಯಲ್ಲಿ ಸಂಸ್ಥೆಯ ಚೇರ್ಮನ್ ಪ್ರೋ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೋ. ಪ್ರೇಮಾನಂದ ರೋಣದ, ನಿರ್ದೇಶಕರುಗಳಾದ ಪ್ರೋ. ರೋಹಿತ್ ಒಡೇಯರ, ಪ್ರೋ. ಸೈಯದ್ ಮತಿನ ಮುಲ್ಲಾ, ಪ್ರೋ. ರಾಹುಲ್ ಒಡೇಯರ, ಆಡಳಿತಾಧಿಕಾರಿ ಶ್ರೀ ಎಮ್ ಸಿ ಹಿರೇಮಠ, ಭೋಧಕ – ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲಕರು, ಗಣ್ಯರು ಉಪಸ್ಥಿತರಿದ್ದರು.