ಗದಗ, ಏಪ್ರಿಲ್ 16 – ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಜಾತಿ ಗಣತಿ ವರದಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಗದಗನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಈ ವರದಿಯನ್ನು ದೋಷಪೂರಿತವೆಂದು ಅಭಿಪ್ರಾಯಪಟ್ಟಿದ್ದು, “ಲಿಂಗಾಯತರಿಗೆ ತೀವ್ರ ಅನ್ಯಾಯವಾಗಿದೆ” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವರದಿ ಸಾರ್ವಜನಿಕರಲ್ಲಿ ಸಂದೇಹ ಹುಟ್ಟುಹಾಕಿದೆ”
ಸುಮಾರು ಎಂಟತ್ತು ವರ್ಷಗಳ ಹಿಂದೆ ನಡೆದ ಜಾತಿ ಗಣತಿಯು ಸಮರ್ಪಕವಲ್ಲದೆ, ರಾಜ್ಯದ ಪ್ರತಿಯೊಬ್ಬ ನಾಗರಿಕನ ಮಾಹಿತಿಯನ್ನು ಸಮಗ್ರವಾಗಿ ದಾಖಲಿಸಿಲ್ಲ ಎಂಬ ಆರೋಪವನ್ನು ಶ್ರೀಗಳು ಮಾಡಿದ್ದಾರೆ. ವರದಿಯಲ್ಲಿ ನೂರಾರು ಉಪಜಾತಿಗಳನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ಅತ್ಯಂತ ಆಘಾತಕಾರಿ ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.
ಲಿಂಗಾಯತರು ಗಣನೀಯ ಸಂಖ್ಯೆಯಲ್ಲಿ ಇದ್ದರೂ ಕಡಿಮೆ ಉಲ್ಲೇಖ:
“ಕರ್ನಾಟಕದಲ್ಲಿ ಲಿಂಗಾಯತರು ಬಹು ಸಂಖ್ಯಾತರು. ಅಂದಾಜು 1 ಕೋಟಿ 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಈ ಸಮುದಾಯಕ್ಕೆ ವರದಿಯಲ್ಲಿ ಕೇವಲ 72 ಲಕ್ಷ ಎಂದು ತೋರಿಸಲಾಗಿದೆ. ಇದು ಕೇವಲ ಲಿಂಗಾಯತರ ವಿರುದ್ಧವಲ್ಲ, ಒಕ್ಕಲಿಗರಿಗೂ ಅನ್ಯಾಯವಾಗಿದೆ,” ಎಂದು ಡಾ. ಸಿದ್ದರಾಮ ಶ್ರೀಗಳು ಹೇಳಿದ್ದಾರೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಮೀಸಲಾತಿಯ ಹೆಸರಿನಲ್ಲಿ ಉಪಜಾತಿಗಳ ಪ್ರಸ್ತಾಪ:
ಲಿಂಗಾಯತರು ತಮ್ಮನ್ನು ಮೀಸಲಾತಿಗಾಗಿ ಉಪಜಾತಿಗಳ ಹೆಸರಿನಲ್ಲಿ ದಾಖಲಿಸಿದ್ದರಿಂದ ಕೂಡ ಜನಸಂಖ್ಯೆ ಕಡಿಮೆಯಾಗಿ ತೋರಿದಿರಬಹುದೆಂಬ ಅಂದಾಜುಗಳೂ ಕೇಳಿಬಂದಿವೆ. ಆದರೆ ದೋಷಪೂರಿತ ವರದಿಯನ್ನು ಸರ್ಕಾರ ಒಪ್ಪಿಕೊಳ್ಳುವುದರಿಂದ ಅನೇಕ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ವ್ಯವಸಾಯ ಕ್ಷೇತ್ರಗಳಲ್ಲಿ ಅನ್ಯಾಯ ಸಂಭವಿಸುವ ಭೀತಿ ವ್ಯಕ್ತವಾಗಿದೆ.
ಪುನಃ ಸಮೀಕ್ಷೆಗೆ ಒತ್ತಾಯ – ರಾಜ್ಯದ ಮಠಾಧೀಶರಿಂದ ಸ್ಪಷ್ಟ ನಿಲುವು:
ಸರ್ಕಾರ ನೈಜ ಹಾಗೂ ಸತ್ಯಾಧಾರಿತ ವರದಿ ಸಿದ್ಧಪಡಿಸಬೇಕು. ಯಾರು ತೊಂದರೆಗೊಳಗಾಗದಂತೆ, ಸಾಮಾಜಿಕ ನ್ಯಾಯದ ತತ್ವ ಪಾಲನೆ ಮಾಡುವ ರೀತಿಯಲ್ಲಿ ಮುಂದುವರಿಯಬೇಕು ಎಂದು ತೋಂಟದಾರ್ಯ ಮಠದ ನಿಲುವು ಸ್ಪಷ್ಟವಾಗಿದೆ.

ರಾಜಕೀಯ ಉದ್ದೇಶ – ಸಚಿವರಿಂದಲೂ ಅಸಮಾಧಾನ:
ಕಾಂಗ್ರೆಸ್ ನ ಲಿಂಗಾಯತ ಮತ್ತು ಒಕ್ಕಲಿಗ ಮೂಲದ ಕೆಲ ಸಚಿವರೂ ಸಹ ಈ ವರದಿಯು ದೋಷಪೂರಿತವಾಗಿದ್ದು, ಮರಳಿ ಪರಿಶೀಲನೆ ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ಜಾತಿ ಗಣತಿಯ ಹಿಂದಿನ ಉದ್ದೇಶವು ಸ್ಪಷ್ಟವಲ್ಲ ಎಂದು ಅವರು ಹೇಳಿದ್ದಾರೆ.

ಎಲ್ಲಾ ಕಣ್ಣುಗಳು ಏಪ್ರಿಲ್ 17ರ ವಿಶೇಷ ಸಚಿವ ಸಂಪುಟದ ಸಭೆಯತ್ತ:
ಸಮಾಜದ ಗಣ್ಯ ವ್ಯಕ್ತಿಗಳು, ಮಠಾಧೀಶರು ಈ ವಿಚಾರದಲ್ಲಿ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಏಪ್ರಿಲ್ 17ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ತೀರ್ಮಾನ ಹೊರ ಬೀಳಲಿದೆ ಎಂಬ ನಿರೀಕ್ಷೆ ಇದೆ.