ಗದಗ: ಅವಳಿ ನಗರದ ಗದಗ-ಬೆಟಗೇರಿಯಲ್ಲಿ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಎಚ್. ಕಿಲ್ಲೇರ ನಿರ್ದೇಶನದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ನಿರೀಕ್ಷರು ಶುಕ್ರವಾರ 31ಕ್ಕೂ ಅಧಿಕ ಶಾಲಾ ವಾಹನಗಳನ್ನು ತಪಾಸಣೆಗೊಳಪಡಿಸಿ, 7 ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದರು.
ವರದಿ : ಪರಮೇಶ ಎಸ್ ಲಮಾಣಿ.
ಶಾಲಾ ವಾಹನಗಳಿಗೆ ಸಂಬಂಧಪಟ್ಟ ಕಾಗದ ಪತ್ರಗಳು, ಫಿಟ್‌ನೆಸ್, ವಿಮೆ, ಪರ್ಮಿಟ್, ವಾಹನ ಚಾಲನಾ ಪರವಾನಗಿ ಪತ್ರ, ಟ್ಯಾಕ್ಸ್ ಸೇರಿ ದಾಖಲಾತಿಗಳನ್ನು ಪರಿಶೀಲಿಸಿದ ಅಧಿಕಾರಿಗಳು ಟ್ಯಾಕ್ಸ್ ತುಂಬಿರದ, ಪರ್ಮಿಟ್ ಇಲ್ಲದ ಹಾಗೂ ಶಾಲಾ ವಾಹನಗಳ ರಹದಾರಿ ಉಲ್ಲಂಘನೆ ಮಾಡಿದ 7 ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಯಿತು.
ಇನ್ನುಳಿದ ಶಾಲಾ ವಾಹನಗಳಿಗೆ ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ನವೀಕರಿಸಿಕೊಳ್ಳಲು ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸಲು ವಾಹನ ಚಾಲಕರಿಗೆ ಹಾಗೂ ಸಹ ಚಾಲಕರಿಗೆ ತಿಳಿವಳಿಕೆ ನೀಡಿದ ಅಧಿಕಾರಿಗಳು ಶಾಲಾ ವಿದ್ಯಾರ್ಥಿಗಳು ವಾಹನ ಏರಿದ ನಂತರ ಸೀಟ್‌ನಲ್ಲಿ ಕುಳಿತ ಮೇಲೆ ಮುಂದೆ ಸಾಗಬೇಕು. ವಾಹನದಿಂದ ಕೆಳಗಿಳಿದ ನಂತರ ಅವರು ರಸ್ತೆ ದಾಟಿದ ಬಳಿಕ ಮುಂದೆ ಸಾಗಬೇಕು. ಶಾಲಾ ವಾಹನದ ಬಾಗಿಲನ್ನು ಸರಿಯಾಗಿ ಲಾಕ್ ಮಾಡಿಕೊಳ್ಳಬೇಕು. ಕಡಿಮೆ ಮಿತಿಯಲ್ಲಿ ವಾಹನ ಚಾಲನೆ ಮಾಡಬೇಕು, ರಸ್ತೆ ಬದಿಯಲ್ಲಿ ಪಾರ್ಕ ಮಾಡಬೇಕು. ವಾಹನದ ಇಂಡಿಕೇಟರ್, ಹೆಡ್‌ಲೈಟ್ಸ್ ಸುಸ್ಥಿತಿಯಲ್ಲಿರಬೇಕು ಎಂಬುದಾಗಿ ತಿಳಿವಳಿಕೆ ನೀಡಿದರು.
ಲಕ್ಷ್ಮೇಶ್ವರ ತಾಲೂಕಿನಲ್ಲಿ ಇತ್ತೀಚೆಗೆ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯದಿಂದ 4 ವರ್ಷದ ವಿದ್ಯಾರ್ಥಿ ಶಾಲಾ ವಾಹನದಿಂದ ಬಿದ್ದು ಮೃತಪಟ್ಟಿದ್ದನು. ಮೃತ ವಿದ್ಯಾರ್ಥಿಯ ಪೋಷಕರು ಹಾಗೂ ಜಿಲ್ಲೆಯ ಸಾರ್ವಜನಿಕರು ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯಯನ್ನು ಖಂಡಿಸಿದ್ದರು. ಲಕ್ಷ್ಮೇಶ್ವರದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಅಧಿಕಾರಿಗಳು ಜಿಲ್ಲೆಯಲ್ಲಿರುವ ಎಲ್ಲ ಶಾಲಾ-ಕಾಲೇಜು ವಾಹನಗಳ ದಾಖಲಾತಿ ಪರಿಶೀಲನೆ, ಫಿಟ್‌ನೆಸ್, ವಿಮೆ ಸೇರಿ ವಾಹನಗಳ ಸ್ಥಿತಿಯನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡುತ್ತಿದ್ದಾರೆ. ನಿಯಮ ಉಲ್ಲಂಘಿಸಿರುವ ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ.
ವಿಶೇಷ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಭಾಗಿ
ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಎಚ್. ಕಿಲ್ಲೇರ ಅವರ ನಿರ್ದೇಶನದದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ. ಹಾಗೂ ಹಿರಿಯ ಮೋಟರ ವಾಹನ ನಿರೀಕ್ಷಕರಾದ ಅರುಣ ಕಟ್ಟಿಮನಿ, ಬಾಲಚಂದ್ರ ತೊದಲಬಾಗಿ ಅವರ ನೇತೃತ್ವದ ವಿಶೇಷ ತಂಡ 31 ವಾಹನಗಳನ್ನು ತಪಾಸಣೆ ಮಾಡಿ, 7 ಶಾಲಾ ವಾಹನಗಳ ರಹದಾರಿ ಉಲ್ಲಂಘನೆ ಮಾಡಿದ ಶಾಲಾ ವಾಹನಗಳ ಪ್ರಕರಣ ದಾಖಲಿಸಲಾಗಿದೆ. ಇತರೆ ಶಾಲಾ ವಾಹನಗಳಿಗೆ ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ನವೀಕರಿಸಿಕೊಳ್ಳಲು ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸಲು ವಾಹನ ಚಾಲಕರಿಗೆ ಹಾಗೂ ಸಹ ಚಾಲಕರಿಗೆ ತಿಳಿವಳಿಕೆ ನೀಡಿದ್ದಾರೆ.
ಈಗಾಗಲೇ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಶಾಲಾ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ನವೀಕರಿಸಿಕೊಳ್ಳಬೇಕು. ಪರಿಣಿತಿ ಹೊಂದಿರುವ ಚಾಲಕರನ್ನು ಹಾಗೂ ಸಹಾಯಕರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ತಿಳಿವಳಿಕೆ ನೀಡಲಾಗಿದೆ. ನವೀಕರಿಸಿಕೊಳ್ಳುವುದು ಹಾಗೂ ಪರ್ಮಿಟ್ ಇಲ್ಲದೇ ನಿರ್ಲಕ್ಷ್ಯ ಹೊಂದಿದ ಶಾಲಾ ವಾಹನಗಳನ್ನು ಸೀಜ್ ಮಾಡಲಾಗುವುದು.
–ಅರುಣ ಕಟ್ಟಿಮನಿ, ನಿರೀಕ್ಷರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯ, ಗದಗ.
