ಮುಂಡರಗಿ (ಗದಗ):
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೊರವಲಯದಲ್ಲಿ ಕಾರು ಹಾಗೂ ಸರಕಾರಿ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಸಂಜೆ ವೇಳೆ ನಡೆದಿದೆ.
ಈ ಅಪಘಾತದಲ್ಲಿ ಹೊಸಹಳ್ಳಿ ಗ್ರಾಮದ ಮಹೇಶ್ ಗೋಣೆಪ್ಪನವರ (40) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಮಹೇಶ್ ಅವರು ಮುಂಡರಗಿ ಕಡೆಯಿಂದ ಗದಗ ಕಡೆಗೆ ಹೊರಟಿದ್ದರೆ, ಅದೇ ವೇಳೆ ಗದಗದಿಂದ ಮುಂಡರಗಿಗೆ ಬರುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್ ಕಾರಿಗೆ ಎದುರು ಬಂದು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ವೇಗ ಮತ್ತು ತೀವ್ರತೆಯಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಘಟನೆಯ ತೀವ್ರತೆಯನ್ನ ಪ್ರತ್ಯಕ್ಷವಾಗಿ ಕಂಡು ಬೆಚ್ಚಿಬಿದ್ದಿದ್ದಾರೆ.
ಅಪಘಾತದ ಮಾಹಿತಿ ದೊರಕುತ್ತಿದ್ದಂತೆಯೇ ಮುಂಡರಗಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ವಾಹನಗಳ ಸ್ಥಾನ, ರಸ್ತೆಯ ಪರಿಸ್ಥಿತಿ ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ ಪ್ರಕರಣವನ್ನು ದಾಖಲಿಸಲಾಗಿದೆ.
ಕಾರಣ ಇನ್ನೂ ಸ್ಪಷ್ಟವಾಗದಿರುವುದರಿಂದ, ವೇಗ ಮಿತಿ ಉಲ್ಲಂಘನೆ, ರಸ್ತೆಯ ತಿರುವು ಮತ್ತು ವಾಹನ ನಿರ್ವಹಣಾ ಅಥವಾ ಯಾವ ವಾಹನಗಳ ಚಾಲಕರ ದೋಷಗಳ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.
ಮುಂಡರಗಿ–ಗದಗ ಮಾರ್ಗದಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆ ಸುರಕ್ಷತೆ ಕ್ರಮಗಳನ್ನು ಬಲಪಡಿಸುವಂತೆ ಆಗ್ರಹಿಸಿದ್ದಾರೆ.
