ಗದಗ:
ಬದಾಮಿ- ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಭದ್ರತಾ ನಿಯಮಗಳ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಬಸ್‌ಗೆ ಪ್ರೆಂಟ್ ಗ್ಲಾಸ್ (ಮುಂಭಾಗದ ಗಾಜು) ಇಲ್ಲದೇ ಸಂಚಾರ ನಡೆಸಿರುವುದನ್ನು ಕಂಡು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಗದಗ ನಗರದಲ್ಲಿ ನಿನ್ನೆ ರಾತ್ರಿ ( ಅ.25) ನಡೆದಿದೆ.
ಮಾಹಿತಿಯಂತೆ, ಬದಾಮಿ ಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಗದಗ ಜಿಲ್ಲೆಯ ಬೆಟಗೇರಿ ಹತ್ತಿರ ತಲುಪಿದಾಗ ಪ್ರಯಾಣಿಕರು ವಾಹನದ ಮುಂಭಾಗದಲ್ಲಿ ಗಾಜು ಇಲ್ಲದೇ ಇರುವುದನ್ನು ಗಮನಿಸಿದ್ದಾರೆ. ಕತ್ತಲಲ್ಲಿ ಬಸ್ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಯಾವುದೇ ಅಪಘಾತ ಸಂಭವಿಸಿದರೆ ಜೀವ ಹಾನಿ ಸಂಭವಿಸುವ ಭೀತಿ ಉಂಟಾಗಿರುವುದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ.
ಬಸ್ ಮಾಲೀಕರು ಮತ್ತು ನಿರ್ವಾಹಕರು ಪ್ರಯಾಣಿಕರ ಜೀವಭದ್ರತೆಯನ್ನು ಕಡೆಗಣಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಯಾಣಿಕರು, ಸ್ಥಳದಲ್ಲೇ ಬಸ್ ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಅಸಮಾಧಾನ ಹೊರಹಾಕಿದರು. “ಏನಾದರೂ ಅಪಘಾತ ನಡೆದರೆ ಯಾರ ಹೊಣೆ?” ಎಂಬ ಪ್ರಶ್ನೆಯನ್ನು ಎತ್ತಿದ ಪ್ರಯಾಣಿಕರು ಪೊಲೀಸರ ಗಮನಕ್ಕೂ ವಿಷಯವನ್ನು ತಂದರು.
ಮಾಹಿತಿ ಪಡೆದ ಬೆಟಗೇರಿ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಬಸ್ ಪರಿಶೀಲನೆ ನಡೆಸಿದರು. ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದ ಖಾಸಗಿ ವಾಹನ ಮಾಲೀಕರ ನಿರ್ಲಕ್ಷ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ.
ಈ ಘಟನೆಯ ನಂತರ ಪ್ರಯಾಣಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.