
ಮುಂಡರಗಿ:ಕೆಎಸ್ಆರ್ಟಿಸಿ ಬಸ್ ನ ಪಾಟಾ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಹೈದರ್ ನಗರ ಸಮೀಪ ನಡೆದಿದೆ.
ಕೊಪ್ಪಳ ನಗರಕ್ಕೆ ತೆರಳುತ್ತಿದ್ದ ಬಸ್ ನ ಪಾಟಾ ತುಂಡಾದ ಹಿನ್ನೆಲೆ, ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ, ಪಕ್ಕದ ಜಮೀನಿಗೆ ಉರುಳಿದೆ. ಈ ವೇಳೆ ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಗಾಯಗಳಾಗಿವೆ.
ಇಂದು ಬೆಳಿಗ್ಗೆ ಕೊಪ್ಪಳ ತಾಲೂಕಿನ ಕೆಸಲಾಪುರ ಗ್ರಾಮದಿಂದ ಹೊರಟಿದ್ದ ಬಸ್, ಹೈದರ್ ನಗರ, ಹಟ್ಟಿ ಗ್ರಾಮ, ಹಾಗೂ ಅಳವಂಡಿ ಗ್ರಾಮದ ಮಾರ್ಗವಾಗಿ ಕೊಪ್ಪಳಕ್ಕೆ ತೆರಳಬೇಕಿತ್ತು. ಆದರೆ ಬಸ್ ನ ಪಾಟಾ ತುಂಡಾದ ಹಿನ್ನೆಲೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಹೈದರ್ ನಗರ ಸಮೀಪ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

60 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ಬಸ್ ನಲ್ಲಿ, ಶಾಲಾ ಸಮಯ ಆಗಿದ್ದರಿಂದ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ ವಿದ್ಯಾರ್ಥಿಗಳ ತಲೆ, ಹಾಗೂ ಕೈ ಕಾಲುಗಳಿಗೆ ಪೆಟ್ಟಾಗಿ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನ ಅಂಬ್ಯುಲೆನ್ಸ್ ಮೂಲಕ ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಅಳವಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಓರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಹೈದರ್ ನಗರ ಹಾಗೂ ಹಟ್ಟಿ ಗ್ರಾಮದ ಮಧ್ಯೆ ಬಹಳಷ್ಟು ದಿನಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಂಚಾರಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ನಿಧಾನಗತಿಯಲ್ಲಿ ಕಾಮಗಾರಿ ನಡೆದಿದೆ. ಅಲ್ಲದೇ ರಸ್ತೆಯನ್ನ ಸಂಪೂರ್ಣವಾಗಿ ಅಗೆಯಲಾಗಿದ್ದು, ಈ ರೀತಿಯ ಅಪಘಾತಗಳಿಗೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.