ಚಾಮರಾಜನಗರ: ಸೌತೆಕಾಯಿ ವಿಚಾರಕ್ಕೆ ಅಣ್ಣನೇ ತಂಗಿಯನ್ನ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲಾ ದಲ್ಲಿ ನಡೆದಿದೆ.
ಐಮಾನ್ ಭಾನು ಕೊಲೆಯಾದ ದುರ್ದೈವಿಯಾಗಿದ್ದು, ಕೊಲೆಗಾರ ಫರ್ಮಾನ್ ಪೊಲೀಸರಿಗೆ ಶರಣಾಗತಿ ಆಗಿದ್ದಾನೆ.
ಅಸಲಿಗೆ ತಂಗಿಯನ್ನ ಅಣ್ಣ ಕೊಚ್ಚಿ ಕೊಲ್ಲಲು ಕಾರಣ ಏನೆಂದರೆ, ಕೇವಲ ಸೌತೆ ಕಾಯಿ ವಿಚಾರ. ಹೌದು,
ನಿನ್ನೆ ರಾತ್ರಿ ಕೊಲೆ ಪಾತಕಿ (ಫರ್ಮಾನ್) ಊಟ ಮಾಡುವ ವೇಳೆ ತನ್ನ ಅಣ್ಣನ ಮಗುವಿಗೆ ಸೌತೆಕಾಯಿ ತಿನ್ನಿಸುತ್ತಿದ್ದ. ಮೊದಲೇ ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಸೌತೆಕಾಯಿ ತಿನ್ನಿಸೋದನ್ನ ನೋಡಿದ ಅತ್ತಿಗೆ ತಸ್ಲಿಮ್ ತಾಜ್, ಮಗುವಿಗೆ ಹುಷಾರಿಲ್ಲ, ಸೌತೆಕಾಯಿ ತಿನ್ನಿಸಬೇಡ ಎಂದಿದ್ದಾಳೆ.
ಇದೆ ವೇಳೆ (ಕೊಲೆ ಆರೋಪಿ) ಫರ್ಮಾನ್ ತಂಗಿ ಐಮಾನ್ ಭಾನು, ಅತ್ತಿಗೆ ಧ್ವನಿಗೆ ಜೊತೆಯಾಗಿ, ಅಣ್ಣ ಫರ್ಮಾನ್ ಗೆ ನಿಂದಿಸಿದ್ದಾಳೆ. ತಂಗಿ ಬೈಯ್ಯುತ್ತಿದ್ದಂತೆ ರೊಚ್ಚಿಗೆದ್ದಿದ್ದ ಆರೋಪಿ ಫರ್ಮಾನ್ ಪಾಷ, ತಕ್ಷಣವೆ ಅಡಿಗೆ ಮನೆಯಲ್ಲಿದ್ದ ಮಾಂಸ ಕತ್ತರಿಸುವ ಕತ್ತಿಯಿಂದ ತಂಗಿ ಮೇಲೆ ಹಲ್ಲೆ ಮಾಡಿದ್ದು, ತಂಗಿ ಐಮಾನ್ ಕತ್ತಿಗೆ ಮಾಂಸ ಕತ್ತರಿಸುವ ಕತ್ತಿಯಿಂದ ಕೊಚ್ಚಿದ್ದಾನೆ.
ತಕ್ಷಣವೇ ರಕ್ಷಣೆಗೆ ಬಂದ ಅತ್ತಿಗೆ ಮೇಲೆಯೂ ದುರುಳ ಅಟ್ಯಾಕ್ ಮಾಡಿದ್ದಾನೆ. ಇತ್ತ ಗಲಾಟೆಯ ಸದ್ದು ಕೇಳಿ ಕೆಳಗೆ ಬಂದ ತಂದೆಯ ಮೇಲೂ ಫರ್ಮಾನ್ ಹಲ್ಲೆ ನಡೆಸಿದ್ದಾನೆ. ನಂತರ ಚೀರಾಟ ಕೂಗಾಟ ಕೇಳಿ ಸ್ಥಳಿಯರು ರಕ್ಷಣೆಗೆ ಧಾವಿಸಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಫರ್ಮಾನ್ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ.ಕೊನೆಗೆ ತಾನೆ 112 ಗೆ ಕರೆ ಮಾಡಿ ಪೊಲೀಸರನ್ನ ಮನೆಗೆ ಕರೆಸಿಕೊಂಡು ಐನಾತಿ ಶರಣಾಗಿದ್ದಾನೆ.
ಸದ್ಯ ಕೊಳ್ಳೇಗಾಲ ಪಟ್ಟಣ ಪೊಲೀಸರು ಆರೋಪಿ ವಿಚಾರಣೆ ನಡೆಸಿದ್ದು, ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.