ಬೆಳಗಾವಿ: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭ ಆಗಲಿದೆ. 9 ದಿನಗಳ ಕಾಲ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಪ್ರತಿಷ್ಠೆಯ ಜಿದ್ದಿಗೆ ಅಧಿವೇಶನ ಸಾಕ್ಷಿಯಾಗಲಿದೆ.
ಮುಡಾ ಪ್ರಕರಣ, ವಕ್ಫ್ ವಿವಾದ, ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ, ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ವಿವಾದ, ಗ್ಯಾರಂಟಿ ಯೋಜನೆಯಲ್ಲಿ ಲೋಪ, ಹೀಗೆ ಸರ್ಕಾರದ ವಿರುದ್ದ ಸಾಲು ಸಾಲು ಅಸ್ತ್ರಗಳನ್ನ ಪ್ರಯೋಗಿಸಲು ವಿರೋಧ ಪಕ್ಷ ಬಿಜೆಪಿ ಸಜ್ಜಾಗಿದೆ.
ಆ ಮೂಲಕ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿದ್ದು, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪ್ರಾಮುಖ್ಯತೆ ಸಿಗಲಿ ಅನ್ನುವ ಉದ್ದೇಶದಿಂದ ಪ್ರತಿವರ್ಷ ಈ ಅಧಿವೇಶನ ನಡೆಸುತ್ತಿದ್ದು , ಪ್ರತಿ ಬಾರಿ ಕೋಟಿಗಟ್ಟಲೆ ಖರ್ಚು ಆಗುತ್ತದೆಯೇ ವಿನಃ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಹೇಳಿಕೊಳ್ಳುವಂಥಹ ಪ್ರಾಮುಖ್ಯತೆ ಸಿಕ್ಕಿಲ್ಲ. ಈ ವರ್ಷವಾದರೂ ಎಷ್ಟರ ಮಟ್ಟಿಗೆ ಅಧಿವೇಶನ ಸಾರ್ಥಕತೆ ಪಡೆದುಕೊಳ್ಳುತ್ತದೆ ಅನ್ನುವದು ಒಂಬತ್ತು ದಿನಗಳಲ್ಲಿ ತಿಳಿಯಲಿದೆ.