ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನವೇ ಸಿಎಂ ಸಿದ್ದರಾಮಯ್ಯ ಅವರ ಕೊನೆಯ ಅಧಿವೇಶನವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರೋ ಅವರು, ಮುಡಾ ಹಗರಣದಲ್ಲಿ ಭ್ರಷ್ಟಾಚಾರ ನಡೆಸಿ ಒಂದನೇ ಆರೋಪಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಹರಾಜಿಗಿದೆ. ಯಾರಾಗ್ತಾರೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸರಕಾರದಲ್ಲಿ ದುಡ್ಡು ಇಲ್ಲ. ಶಾಸಕರಿಗೆ ಅನುದಾನ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಗುತ್ತಿಲ್ಲ. ನಮ್ಮ ಬಳಿ 66 ಶಾಸಕರಿದ್ದಾರೆ. ನಮ್ಮ ಮೇಲೆ ವಿನಾಕಾರಣ ಕಾಂಗ್ರೆಸ್ ಆರೋಪ ಮಾಡ್ತಿದೆ. ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಖರೀದಿಸಲು 50 ಕೋಟಿ, 100 ಕೋಟಿ ರೂ. ಆಫರ್ ಎಂದು ಕಾಂಗ್ರೆಸ್ ನವರು ಬಿಂಬಿಸುತ್ತಿದ್ದಾರೆ, ಸಿಎಂ ಸಿದ್ದರಾಮಯ್ಯಗೆ ಭೀತಿ ಇದೆ. ಆದ್ದರಿಂದ ಇಂಥ ಅಪಪ್ರಚಾರ ನಡೆಸಿದ್ದಾರೆ ಎಂದು ಹೇಳಿದರು.
ಸರಕಾರದಲ್ಲಿರುವ ಶಾಸಕರನ್ನು ನಾವು ಯಾರೂ ಸಂಪರ್ಕ ಮಾಡಿಲ್ಲ. ಚಳಿಗಾಲದ ಅಧಿವೇಶನದಲ್ಲಿ ಸರಕಾರ ಇಕ್ಕಟ್ಟಿಗೆ ಸಿಲುಕಿಸಲು ನಾವು ಸನ್ನದ್ದರಾಗಿದ್ದೇವೆ. ರಾಜ್ಯ ಸರಕಾರ ಕಿತ್ತೂರು ಕರ್ನಾಟಕ, ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದೆ. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು.