ಕಳೆದ ಕೆಲ ದಿನಗಳಿಂದ ನೆಡೆಯುತ್ತಿರುವ ಸಿರಿಯಾದ ಬಂಡುಕೋರರ ಪಡೆಗಳ ಸಮರ ಮುಂದುವರೆದಿದ್ದು ಇಂದು ಸಿರಿಯಾದ ರಾಜಧಾನಿ ಡಮಾಸ್ಕಸ್ ಅನ್ನು ತಮ್ಮ ಸ್ವಾಧಿನಕ್ಕೆ ಪಡೆದುಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗೂ ಮುನ್ನವೇ ಸಿರಿಯಾ ಅಧ್ಯಕ್ಷ ಬಸರ್ ಅಲ್-ಅಸಾದ್ ದೇಶದಿಂದ ಪಲಾಯನ ಮಾಡಿರುವುದು ಸದ್ಯ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ವಿಮಾನದಲ್ಲಿ ದೇಶದಿಂದ ಪಲಾಯನ ಮಾಡಿರುವುದು ಖಚಿತವಾಗಿದ್ದೇ ಆದರೂ ಎಲ್ಲಿಗೆ ತೆರಳಿದ್ದಾರೆ? ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲಿಯವರೆಗೂ ಲಭಿಸಿಲ್ಲ.
ಕಳೆದ 24 ವರ್ಷಗಳ ಕಾಲ ದೇಶವನ್ನು ಆಳಿದ್ದ ಅಸ್ಸಾದ್, ಅಜ್ಞಾತ ಸ್ಥಳಕ್ಕೆ ವಿಮಾನದ ಮೂಲಕ ತೆರಳಿದ್ದಾರೆ ಎಂದು ಸಿರಿಯಾ ಮಿಲಿಟರಿಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಸ್ಸಾದ್ ಪಲಾಯನ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾ, ಸುಮಾರು 14 ವರ್ಷಗಳ ಅಂತರ್ಯುದ್ಧದ ನಂತರ ಬಂಡುಕೋರರಿಂದ ಉರುಳಿಸಲ್ಪಟ್ಟ ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ರಷ್ಯಾ ಹೇಳಿದೆ.
ಬಸರ್ ಅಲ್-ಅಸಾದ್ ರಾಜೀನಾಮೆ ನೀಡುವ ಮೊದಲು ಸಂಘರ್ಷದಲ್ಲಿ ಭಾಗವಹಿಸಿದ ಅನೇಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಶಾಂತಿಯುತ ಅಧಿಕಾರ ಹಸ್ತಾಂತರದ ಬಗ್ಗೆ ಆಡಳಿತಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಅವರು ದೇಶವನ್ನು ತೊರೆದಿದ್ದಾರೆ. ಈ ಚರ್ಚೆಯಲ್ಲಿ ಮಾಸ್ಕೋ ಭಾಗವಹಿಸಲಿಲ್ಲ ಎಂದು ರಷ್ಯಾ ಉಲ್ಲೇಖಿಸಿದೆ.
ಇನ್ನು ನಿರಂಕುಶಾಧಿಕಾರಿ ಬಸರ್ ಅಲ್-ಅಸಾದ್ ದೇಶದಿಂದಲೇ ಪಲಾಯನ ಮಾಡಿದ್ದಾನೆ. ನಾವು ರಾಜಧಾನಿ ಡಮಾಸ್ಕಸ್ ಅನ್ನು ನಿರಂಕುಶಾಧಿಕಾರಿ ಅಸ್ಸಾದ್ನಿಂದ ಮುಕ್ತಗೊಳಿಸಿದ್ದೇವೆ ಎಂದು ಬಂಡುಕೋರರು ಘೋಷಿಸಿದ್ದಾರೆಂದು ಅಲ್ ಜಜೀರಾ ತನ್ನ ವರದಿಯಲ್ಲಿ ತಿಳಿಸಿದೆ. ನಾವು ಇಂದು 8-12–2024 ಈ ಕರಾಳ ಯುಗದ ಅಂತ್ಯ ಮತ್ತು ಸಿರಿಯಾದ ಹೊಸ ಯುಗದ ಆರಂಭವನ್ನು ಘೋಷಿಸುತ್ತೇವೆ ಎಂದು ಹಯಾತ್ ತಹ್ರೀರ್ ಅಲ್-ಶಾಮ್ ಬಂಡಾಯ ಬಣವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ಯಾವುದೇ ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಹೇಳಿದ್ದಾರೆ.
ಅಸ್ಸಾದ್ ಆಳ್ವಿಕೆ ಅಂತ್ಯಗೊಂಡ ಬೆನ್ನಲ್ಲೇ ಡಮಾಸ್ಕಸ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದ್ದು, ಇಲ್ಲಿನ ಪರಿಸ್ಥಿತಿಯಲ್ಲಿ ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ,(ಏಜೆನ್ಸೀಸ್).