Home » News » “ಬಸವ ಅನುಯಾಯಿಗಳು ತಾಲಿಬಾನಿಗಳು!”ಕನೇರಿ ಶ್ರೀಗಳ ಹೇಳಿಕೆಗೆ ಲಿಂಗಾಯತ ಮಠಾಧಿಪತಿಗಳ ಆಕ್ರೋಶ!

“ಬಸವ ಅನುಯಾಯಿಗಳು ತಾಲಿಬಾನಿಗಳು!”ಕನೇರಿ ಶ್ರೀಗಳ ಹೇಳಿಕೆಗೆ ಲಿಂಗಾಯತ ಮಠಾಧಿಪತಿಗಳ ಆಕ್ರೋಶ!

by CityXPress
0 comments

ಧಾರವಾಡ: ಕನೇರಿ ಕಾಡಸಿದ್ಧೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ “ಬಸವಾನುಯಾಯಿಗಳನ್ನು ತಾಲಿಬಾನಿ” ಗಳೆಂದು ನಿಂದಿಸಿರುವುದು ಅಕ್ಷಮ್ಯ. ಮಹಾಮಾನವತಾವಾದಿ ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸ ಬಯಸಿದವರು. ಅವರ ಆದರ್ಶಗಳನ್ನೇ ತಮ್ಮ ಬದುಕಿನ ಗುರಿಯಾಗಿಸಿಕೊಂಡ ಬಸವಾನುಯಾಯಿಗಳು ಇತರರಿಗೆ ಭಯ ಭೀತಿಯನ್ನುಂಟು ಮಾಡುವವರಲ್ಲ, ಕೊಲೆ-ಸುಲಿಗೆಗಳಲ್ಲಿ ಭಾಗಿಯಾದವರಲ್ಲ.

ವಸ್ತುಸ್ಥಿತಿ ಹೀಗಿದ್ದರೂ ಅವರನ್ನು ತಾಲಿಬಾನಿಗಳೆಂದು ಬಸವ ಪರಂಪರೆಯವರೇ ಆದ ಕನೇರಿ ಶ್ರೀಗಳು ಜರಿದಿರುವುದು ಅಸಹನೆಯ ಮತ್ತು ಅಜ್ಞಾನದ ಪರಮಾವಧಿಯಾಗಿದೆ. ಹೀಗಾಗಿ ಶ್ರೀ ಕಾಡಸಿದ್ಧೇಶ್ವರ ಶ್ರೀಗಳು ಬಸವಾನುಯಾಯಿಗಳ ಕ್ಷಮೆ ಕೋರಬೇಕೆಂದು ಎಂದು ಲಿಂಗಾಯತ ಮಠಾಧಿಪತಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಧಾರವಾಡದಲ್ಲಿ ಸಭೆ ಸೇರಿದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸದಸ್ಯರಾಗಿರುವ ಶ್ರೀಗಳೆಲ್ಲರೂ ಕನೇರಿ ಶ್ರೀ ಕಾಡಸಿದ್ಧೇಶ್ವರ ಶ್ರೀಗಳ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕೃಷಿ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀಗಳು ತಮ್ಮ ಈ ಅಸಹಿಷ್ಣುತೆಯ ನಡೆಯಿಂದಾಗಿ ನಾಡಿನ ಎಲ್ಲ ಬಸವ ಪ್ರೇಮಿಗಳ ಮತ್ತು ಬಸವಾನುಯಾಯಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

banner

ಭಾರತೀಯ ಸಂವಿಧಾನವು ಎಲ್ಲ ಧರ್ಮೀಯರಿಗೂ ಈ ದೇಶದಲ್ಲಿ ಸೌಹಾರ್ದತೆಯಿಂದ ಮತ್ತು ಶಾಂತಿಯಿಂದ ಬದುಕುವುದಕ್ಕೆ ಅವಕಾಶ ಕಲ್ಪಿಸಿದೆ. ಹಿಂದುತ್ವ ಪ್ರತಿಪಾದನೆಯ ಅತಿರೇಕದಲ್ಲಿ ಅಸಹನೆಯ ಭಾವವನ್ನು ವ್ಯಕ್ತಪಡಿಸುವುದು ಸಾಧುವಾದ ಕ್ರಮವಲ್ಲ. ಬೊಗಳು ತೆಗಳು ಮುಂತಾದವು ಮಠಾಧಿಪತಿಗಳ ಬಾಯಲ್ಲಿ ಬರುವ ಶಬ್ದಗಳೂ ಅಲ್ಲ.

ಇದನ್ನರಿತು ಶ್ರೀಗಳು ಆವೇಗದಲ್ಲಿ ಜರುಗಿದ ಈ ಘಟನೆಗೆ ವಿಷಾದ ವ್ಯಕ್ತಪಡಿಸಿ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯನ್ನು ಪ್ರದರ್ಶಿಸಬೇಕೆಂದು ಒಕ್ಕೂಟದ ಶ್ರೀಗಳೆಲ್ಲರೂ ಆಗ್ರಹಪೂರ್ವಕ ಒತ್ತಾಯಿಸಿದ್ದಾರೆ.

ಒಕ್ಕೂಟದ ಸಭೆಯಲ್ಲಿ ಮಾರ್ಗದರ್ಶಕರಾದ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯರು, ಅಧ್ಯಕ್ಷರಾದ ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು, ಬಸವಧರ್ಮಪೀಠದ ಡಾ. ಗಂಗಾ ಮಾತಾಜಿಯವರು, ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು, ಬೆಳಗಾವಿಯ ಡಾ. ಅಲ್ಲಮಪ್ರಭು ಸ್ವಾಮಿಗಳು, ಒಕ್ಕೂಟದ ಕಾರ್ಯದರ್ಶಿಗಳಾಗಿರುವ ಹಂದಿಗುಂದದ ಶ್ರೀ ಶಿವಾನಂದ ಸ್ವಾಮಿಗಳು, ಸಂಘಟನಾ ಕಾರ್ಯದರ್ಶಿ ಅಥಣಿಯ ಶ್ರೀ ಪ್ರಭುಚನ್ನಬಸವ ಸ್ವಾಮಿಗಳು ಮತ್ತು ಇತರ ಮಠಾಧಿಪತಿಗಳು ಭಾಗವಹಿಸಿದ್ದರು.

ಕನೇರಿ ಶ್ರೀಗಳ ಅಸಹಿಷ್ಣುತೆಯ ನಡೆಯನ್ನು ಒಕ್ಕೊರಲಿನಿಂದ ಸಭೆಯಲ್ಲಿ ಖಂಡಿಸಲಾಯಿತು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb