ವಿಜಯಪುರ: ರಾಜ್ಯದಲ್ಲಿ ಉಪಚುನಾವಣೆ ಕಾಂಗ್ರೆಸ್ ಪಾಲಾದ ಬೆನ್ನಲ್ಲೇ, ಬಿಜೆಪಿ ಪಕ್ಷದಲ್ಲಿ ಆಂತರಿಕ ಮತ್ತು ಬಹಿರಂಗ ಯುದ್ಧ ಜೋರಾಗಿದೆ. ಪಕ್ಷದ ಒಳಗೊಳಗೆ ಇರುತ್ತಿದ್ದ ಭಿನ್ನಮತ ಇದೀಗ ಹೊರಗಡೆ ಹೇಳಿಕೆ ಪ್ರತಿಹೇಳಿಕೆಗಳ ಮೂಲಕ ಬಟಾ ಬಯಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಯತ್ನಾಳ, ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಿರೋ ವಿಚಾರ ಮುಂದಿಟ್ಟುಕೊಂಡು,, ವಿಜಯೇಂದ್ರ ವಿರುದ್ಧ ಹರಿಹಾಯ್ತಿದ್ದಾರೆ. ಇತ್ತ ವಿಜಯೇಂದ್ರ ಬೆಂಬಲಿಗ ಶಾಸಕರು, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿ ನಿಂತಿದ್ದು,ಯತ್ನಾಳ ವಿರುದ್ಧ ಹೈಕಮಾಂಡ್ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಗುಡುಗುತ್ತಿದ್ದಾರೆ.
ಹೌದು, ವಿಜಯಪುರದಲ್ಲಿ ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ ಹಾಗೂ ಗೋಪಾಲ ಘಟಕಾಂಬಳೆ ಅವರು ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿ, ಯತ್ನಾಳ ವಿರುದ್ಧ ಹರಿಹಾಯ್ದಿದ್ದಾರೆ.ಪಕ್ಷದ ಬ್ಯಾನರ್ ಅಡಿ ಕೈಗೊಂಡ ವಕ್ಸ್ ವಿರುದ್ಧದ ಹೋರಾಟದ ಕ್ರೆಡಿಟ್ ಪಡೆಯಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ್ಯಾಯ ತಂಡ ರಚಿಸಿ ಪಕ್ಷದ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಹೀಗಾಗಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದ್ದು ಕೂಡಲೇ ಯತ್ನಾಳರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಆಗ್ರಹಿಸಿದ್ದಾರೆ.
ಯತ್ನಾಳರ ಈ ನಡೆಯಿಂದಾಗಿ ಬಿಜೆಪಿಯಲ್ಲಿ ಬಣ ರಾಜಕೀಯ ಉಂಟಾಗಿದೆ ಎಂಬ ವದಂತಿ ಹರಡಿದೆ. ಯತ್ನಾಳ ಈ ಹೋರಾಟವನ್ನು ರಾಜಕೀಕರಣಗೊಳಿಸಿದ್ದಾರೆ. ಕಾಂಗ್ರೆಸ್ ನಡೆ ಬಗ್ಗೆ ದೂಷಣೆ ಮಾಡುವುದನ್ನು ಬಿಟ್ಟು ಯತ್ನಾಳ ಸ್ವ ಪಕ್ಷದವರ ವಿರುದ್ಧವೇ ಹರಿಹಾಯುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಹಾಗೂ ಸದಾನಂದಗೌಡರಂಥ ಹಿರಿಯರ ಬಗ್ಗೆ ಟೀಕಿಸುತ್ತಿದ್ದಾರೆ. ಹೀಗಾಗಿ ವಕ್ಸ್ ವಿರೋಧಿ ಹೋರಾಟದ ಬದಲು ಯತ್ನಾಳ ಬಿಜೆಪಿ ವಿರುದ್ಧವೇ ಹೋರಾಟ ಆರಂಭಿಸಿದಂತಿದೆ. ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ. ಹೀಗಾಗಿ ಅವರ ತಂಡವನ್ನು ಮತ್ತು ಹೋರಾಟವನ್ನು ವಿರೋಧಿಸಲಾಗುವುದು ಎಂದು ಕಿಡಿಕಾರಿದ್ದಾರೆ.
ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಬಿರಾದಾರ ಮಾತನಾಡಿ, ವಿಜಯೇಂದ್ರ ಅವರು ಈ ನಾಡಿನಲ್ಲಿ ಪಕ್ಷ ಕಟ್ಟಿದವರು. ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಪಕವಾಗಿ ನಿಭಾಯಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಂದಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ಲ. ಪ್ರಧಾನಿ ಮೋದಿ ಅವರು ಕುಟುಂಬ ರಾಜಕಾರಣದ ಬಗ್ಗೆ ಬಹಳಷ್ಟು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೂ ಯತ್ನಾಳರಿಗೆ ಅರ್ಥವಾಗಿಲ್ಲ. ಯಡಿಯೂರಪ್ಪ ವಚನ ವಿಚಾರಕ್ಕೆ ಬಂದಾಗ ಕುಟುಂಬ ರಾಜಕಾರಣದ ಬಗ್ಗೆ ಟೀಕಿಸೋದು ಉಪ ಚುನಾವಣೆಯಲ್ಲಿ ಬೊಮ್ಮಾಯಿ ಪರ ಪ್ರಚಾರ ಮಾಡುತ್ತಾ ಅಲ್ಲಿ ಬೇರೊಂದು ನಿಲುವು ತಾಳುವುದು. ಇದು ಯತ್ನಾಳರ ಅನುಕೂಲ ಸಿಂಧು ರಾಜಕಾರಣ. ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಚಮೇಲಿ ಥರ ಯತ್ನಾಳ ಎಂದಿದ್ದಾರೆ.
ಸ್ಪಾರ್ ಕ್ಯಾಂಪೇನರ್ ಮಾಡಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುವ ಯತ್ನಾಳ ಈ ಹಿಂದೆ ಪ್ರಚಾರಕ್ಕೆ ಹೋದಲ್ಲೆಲ್ಲ ಎಷ್ಟು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ? ಶಿಗ್ಗಾಂವಿಯಲ್ಲಿ ಪ್ರಚಾರಕ್ಕೆ ಹೋಗಿದ್ದರಲ್ಲ ಗೆಲ್ಲಿಸಲಾಗಲಿಲ್ಲವೇಕೆ? ಎಂದು ಪ್ರಶ್ನಿಸಿದರು.
ಲಕ್ಷ್ಮಿ ಹೆಬ್ಬಾಳಕರ, ವಿಜಯಾನಂದ ಕಾಶಪ್ಪನವರನ್ನು ಟೀಕಿಸುವ ನೀವು ಇದೇ ಕಾಂಗ್ರೆಸ್ ಶಾಸಕರೊಂದಿಗೆ ಸೇರಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಕಾರಣೀಭೂತರಾಗಿದ್ದು ಮರೆತುಹೋಯಿತಾ? ಪಂಚಮಸಾಲಿ ಹೆಸರಲ್ಲಿ ಇವರು ಹೈಕಮಾಂಡ್ ಗೆ ಬ್ಲಾಕ್ ಮೇಲ್ ಮಾಡುವ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಯತ್ನಾಳರ ಮೇಲೆ ಶಿಸ್ತು ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.ವಿಧಾನ ಸಭೆ ಚುನಾವಣೆಯಲ್ಲಿ ಯತ್ನಾಳರ ಹರಕು ಬಾಯಿಯಿಂದಾಗಿಯೇ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಾಗಲಿಲ್ಲ. ಹೀಗಾಗಿ ಪಕ್ಷದ ಕಾರ್ಯಕರ್ತರ ಅಂತರಾಳ ಅರಿತು ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದರು.
ಮುಸಲ್ಮಾನರನ್ನು ಬೈಯ್ಯುವುದೇ ಯತ್ನಾಳರ ಸಾಧನೆಯಾಗಿದೆ. ಈ ಹಿಂದೆ ಬಬಲೇಶ್ವರ ನಾಕಾದಲ್ಲಿ ನಿರ್ಮಾಣವಾದ ಆದಿಲ್ ಶಾಹಿ ವೃತ್ತ ಮಾಡಿದ್ದನ್ನು ವಿರೋಧ ಮಾಡಿ ಮಾತನಾಡಿದ್ದ ನೀವು ಇದೀಗ ಆ ವೃತ್ತವನ್ನು ಅಧಿಕೃತವಾಗಿ ಜಿಲ್ಲಾಧಿಕಾರಿಗಳೇ ಉದ್ಘಾಟಿಸಿದ್ದಾರಲ್ಲ ಸ್ವಾಮಿ ತಡೆಯಲಿಲ್ಲವೇಕೆ? ಕೇವಲ ಪ್ರಚೋದನೆ ಭಾಷಣ ಮಾಡಿ ಹೋಗೋದಲ್ಲ. ಬದಲಾಗಿ ಸ್ವತಃ ಮುಂದೆ ನಿಂತು ತಡೆಯಬೇಕಲ್ಲವೇ? ಎಂದರು.
ಮುರುಗೇಶ ನಿರಾಣಿ ಅವರ ಬಗ್ಗೆ, ಹರಿಹರ ಸ್ವಾಮೀಜಿ ಬಗ್ಗೆ ಎಷ್ಟು ಹಗುರವಾಗಿ ಮಾತನಾಡುತ್ತೀರಿ? ಈ ಹಿಂದೆ ಪಂಚಮಸಾಲಿ ಸಮಾಜದ ಹೋರಾಟದಲ್ಲಿಯೇ ಇಲ್ಲದ ಯತ್ನಾಳ ಇದೀಗ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ ವಿನಃ ಅಲ್ಲಿ ಬೇಡಿಕೆ ಬಗ್ಗೆ ಚಕಾರವೆತ್ತುವುದೇ ಇಲ್ಲ ಎಂದರು.
ಸದಾನಂದಗೌಡರು ಹಾದಿಬೀದಿಯಲ್ಲಿ ಮಾತನಾಡುವುದನ್ನು ಬಿಟ್ಟು ದೆಹಲಿಗೆ ಹೋಗಿ ಹೇಳಿ ಎಂದರೆ ನಿಮಗೆ ನೋವಾಯಿತ್ತಲ್ಲ ನೀವು ಎಷ್ಟು ಬಾರಿ ಯಡಿಯೂರಪ್ಪ ಕುಟುಂಬದ ಬಗ್ಗೆ ಟೀಕಿಸಿದ್ದೀರಿ? ಪ್ರಲ್ಲಾದ ಜೋಷಿ ಅವರನ್ನು, ಬಿ.ಎಲ್. ಸಂತೋಷ ಅಷ್ಟೇ ಏಕೆ ಮೋದಿ ಅವರನ್ನೂ ಬೈಯ್ದನಿಮಗೆ ಯಾವ ಬದ್ಧತೆ ಇದೆ.ಬಿ.ಎಲ್. ಪಾಟೀಲರನ್ನು ಬಿಜೆಪಿಯಿಂದ ಸಂಸದೀಯ ಚುನಾವಣೆಗೆ ನಿಲ್ಲಿಸಿದಾಗ ನೀವು ಸೋಲಿಸಿಲ್ಲವಾ? ಅವರ ವಿರುದ್ಧ ಎಂ.ಬಿ. ಪಾಟೀಲರ ಗೆಲುವಿಗೆ ಸಹಕರಿಸಿಲ್ಲವಾ? ಎಂದ ಬಿರಾದಾರ, ಎಲ್ಲರನ್ನೂ ಹೊಂದಾಣಿಕೆ ರಾಜಕಾರಣ ಎನ್ನುವ ನೀವು ಎಷ್ಟು ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಲ್ಲರಿಗೂ ಹೊತ್ತಿದೆ. ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುವುದನ್ನು ನಿಲ್ಲಿಸಿ ಎಂದರು.ಬಿಜೆಪಿ ಎಸ್ ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಬೀದರನಿಂದ ಚಾಮರಾಜನಗರದವರೆಗೆ ಯತ್ನಾಳರು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ಮಾಡುತ್ತೇವೆ ಎಂದರು.