ಗದಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಮಾತನಾಡಿದ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಇಂದು ಗದಗ ಬೆಟಗೇರಿ ಬಂದ್ ಗೆ ಕರೆ ನೀಡಲಾಗಿತ್ತು. ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಹೌದು..ಸಂಸತ್ ನಲ್ಲಿ ಅಂಬೇಡ್ಕರ್ ಅಂಬೇಡ್ಕರ್ ಅಂತ ಅನ್ನೋ ಬದಲು ದೇವರ ಸ್ಮರಣೆ ಮಾಡಿದ್ರೆ ಸ್ವರ್ಗ ಸೇರ್ತಿದ್ರಿ ಅಂತ ವಿರೋಧಿಗಳಿಗೆ ಛೇಡಿಸಿದ್ದ ಕೇಂದ್ರ ಸಚಿವ ಅಮಿತ್ ಶಾ ರ ಆ ಒಂದು ಮಾತು ಈಗ ಇಡೀ ದೇಶವೇ ಹೊತ್ತಿ ಉರಿಯುವಂತೆ ಮಾಡಿದೆ. ಅದರಲ್ಲೂ ದಲಿತ ಹಾಗೂ ವಿವಿಧ ಸಂಘಟನೆಗಳು ಹೋರಾಟದ ಹಾದಿ ತುಳಿದು ಅಮಿತ್ ಶಾರನ್ನ ಸಚಿವ ಸಂಪುಟದಿಂದ ಕೈ ಬಿಡಬೇಕು ಅಂತ ಪಟ್ಟು ಹಿಡಿದಿದ್ದು, ಗದಗ ಬೆಟಗೇರಿ ಅವಳಿ ನಗರದಲ್ಲಿ ವಿವಿಧ ದಲಿತ ಸಂಘಟನೆಗಳು ಇಂದು ಬಂದ್ ಗೆ ಕರೆ ನೀಡಿದ್ದವು.
ಬೆಳಿಗ್ಗೆ 6ರಿಂದ ಸಂಜೆ 5 ರವರೆಗೆ ಸಂಪೂರ್ಣ ಬಂದ್ ಗೆ ಕರೆ ನೀಡಿದ್ದವು. ಅದರಂತೆ ಗದಗ ಬೆಟಗೇರಿ ಅವಳಿ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಔಷಧಿ, ಹಾಲು, ಆಸ್ಪತ್ರೆ ಬಿಟ್ಟು ಉಳಿದೆಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು. ಬಸ್ ಸಂಚಾರ ಸಹ ನಗರದ ಹೊರವಲಯದಿಂದ ಮಾತ್ರ ಸಂಚಾರ ಮಾಡಿದ್ವು. ಇದರಿಂದ ಜನರು ಪ್ರಯಾಸ ಪಡಬೇಕಾಯ್ತು. ಇನ್ನು ಶಾಲಾ ಕಾಲೇಜುಗಳಿಗೆ ಆರಂಭದಲ್ಲಿ ರಜೆ ನೀಡದ ಜಿಲ್ಲಾಡಳಿತ ಶಾಲಾ ವಾಹನ ಒಂದರ ಸಣ್ಣ ಅಪಘಾತ ಘಟನೆ ಬಳಿಕ,ಅಲ್ಲದೇ ಹೋರಾಟಗಾರರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಳಿಕ, ಎಚ್ಚೆತ್ತು ರಜೆ ಘೋಷಣೆ ಮಾಡಿತು.
ಇನ್ನು ಬೆಳಿಗ್ಗೆ ಆರು ಗಂಟೆ ಸುಮಾರಿಗೆ ನಗರದ ಮುಳಗುಂದ ನಾಕಾ ಬಳಿ ಜಮಾಯಿಸಿದ ಹೋರಾಟಗಾರರು ದೇವರ ನಾಮದ ಬದಲು ಅಂಬೇಡ್ಕರ್ ಅಂಬೇಡ್ಕರ್ ಎಂಬ ನಾಮ ಜಪಿಸಿ ಅಮಿತ್ ಶಾಗೆ ಟಾಂಗ್ ನೀಡಿದರು. ಅಮಿತ್ ಶಾ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಬೆಂಕಿ ಹಚ್ಚಲು ಪೊಲೀಸರು ಅಡ್ಡಿಪಡಿಸಿದರು. ಈ ವೇಳೆ ಭಾವಚಿತ್ರ ಹರಿದು ಹಾಕಿ ಬಾಯಿ ಬಡಿದುಕೊಂಡು ತಮ್ಮ ಆಕ್ರೋಶ ಹೊರಹಾಕಿದರು.
ಇನ್ನು ಅಮಿತ್ ಶಾ ರಾಜೀನಾಮೆ ನೀಡೋವ್ರಗೂ ನಮ್ಮ ಹೋರಾಟ ನಿಲ್ಲೋದಿಲ್ಲ, ಸದ್ಯ ಕೇವಲ ನಗರಕ್ಕೆ ಸೀಮಿತವಾಗಿದೆ ಮುಂದೆ ಇಡೀ ದೇಶವ್ಯಾಪಿ ಹೋರಾಟದ ಕಿಚ್ಚು ವ್ಯಾಪಿಸುತ್ತೆ ಅಂತ ಎಚ್ಚರಿಕೆ ನೀಡಿದರು. ನಂತರ ಮುಳಗುಂದ ನಾಕಾದಿಂದ ನಗರದ ಟಾಂಗಾ ಕೂಟದ ಮೂಲಕ ಗಾಂಧಿ ಸರ್ಕಲ್ ಬಳಿ ಪ್ರತಿಭಟನಾ ಮೆರವಣಿಗೆ ನಡಸಿದರು. ನಂತರ ಗಾಂಧಿ ಸರ್ಕಲ್ ನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ನ ಜಿಎಸ್ ಪಾಟೀಲ್ ಸೇರಿದಂತೆ ನೂರಾರು ಕಾರ್ಯಕರ್ತರು ಸಹ ಪ್ರತಿಭಟನೆಯಲ್ಲಿ ಭಾಗಿಯಾದರು.
ಇನ್ನು ಗದಗ ನಗರದ ಬಹುತೇಕ ಮುಖ್ಯ ರಸ್ತೆಗಳು, ಹಳೆ ಬಸ್ ನಿಲ್ದಾಣ, ಪ್ರಮುಖ ಸರ್ಕಲ್ ಗಳು ಬಂದ್ ನಿಂದಾಗಿ ಬಿಕೋ ಎನ್ನುತ್ತಿದ್ದವು. ಬೆಟಗೇರಿ ಭಾಗದಲ್ಲಿ ಸಹ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಒಟ್ಟಾರೆ ಗದಗ ಬೆಟಗೇರಿ ಅವಳಿ ನಗರ ಇಂದು ಸಂಪೂರ್ಣ ಸ್ತಬ್ಧವಾಗಿದ್ದಂತು ಸುಳ್ಳಲ್ಲ.