ಕೊಪ್ಪಳ: ಈ ಹಿಂದೆ ಗದಗ ಜಿಲ್ಲೆ ಜನರ ನಿದ್ದೆಗೆಡಿಸಿದ್ದ ಬಲ್ಡೋಟಾ ಕಂಪನಿ,ಇದೀಗ ಪಕ್ಕದ ಜಿಲ್ಲೆ ಕೊಪ್ಪಳದಲ್ಲಿ ಮತ್ತಷ್ಟು ತನ್ನ ವ್ಯಾಪ್ತಿ ವಿಸ್ತರಿಸುವ ಮೂಲಕ ನೆಲೆಯೂರಲು ತಯಾರಿ ನಡೆಸಿದೆ.
ಇದರ ಬೆನ್ನಲ್ಲೇ, ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಆಂಡ್ ಪವರ್ ಪ್ಲ್ಯಾಂಟ್ ಪ್ಯಾಕ್ಟರಿಗೆ ವಿರೋಧಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದು, ಹೋರಾಟಕ್ಕೆ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಬೆಂಬಲ ನೀಡಿದ್ದಾರೆ. ಸ್ವಾಮಿಜಿ ಬೆಂಬಲದಿಂದ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಇಂದು ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸಂಘಟಕರು ಹಾಗೂ ಸ್ಥಳಿಯ ಜನಪ್ರತಿನಿಧಿಗಳು ಗವಿಮಠದ ಸ್ವಾಮೀಜಿಗಳನ್ನ ಭೇಟಿ ಮಾಡಿ, ಹೋರಾಟಕ್ಕೆ ತಮ್ಮ ನೇತೃತ್ವ ಬೇಕು ಅಂತ ಮನವಿ ಮಾಡಿದ್ದಾರೆ.
ಈ ವೇಳೆ ಸಂಘಟಿಕರ ಜೊತೆ ಮಾತನಾಡಿದ ಸ್ವಾಮಿಜಿ, ಇದು ಎಲ್ಲರ ಹೋರಾಟವಾಗಿದ್ದು, ಯಾರೇ ಒಬ್ಬರ ನೇತೃತ್ವ ಸಲ್ಲದು. ಹೀಗಾಗಿ ಎಲ್ಲರ ನೇತೃತ್ವದಲ್ಲಿ ಹೋರಾಟ ಮಾಡೋಣಾ ಎಂದು ಹೇಳಿದ್ದಾರೆ.
ಪ್ಯಾಕ್ಟರಿ ಯಿಂದ ಕೊಪ್ಪಳಕ್ಕೆ ದೊಡ್ಡ ಮಟ್ಟದ ತೊಂದರೆಯಾಗುತ್ತದೆ. ತೊಟ್ಟಿಲುಗಳ ಸಂಖ್ಯೆ
ಕಡಿಮೆಯಾಗಿ ಸ್ಮಶಾನಗಳ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ನಮ್ಮ ಭಾಗದಲ್ಲಿ ಪ್ಯಾಕ್ಟರಿಯಾಗದಂತೆ ನೋಡಿಕೊಳ್ಳೋಣಾ. ಈಗಾಗಲೇ 50 ಕ್ಕೂ ಹೆಚ್ಚು ಫ್ಯಾಕ್ಟರಿಗಳು ಕೊಪ್ಪಳದಲ್ಲಿ ನೆಲೆಯೂರಿವೆ. ಇನ್ನೂ ಎಷ್ಟು ಅಂತ ಫ್ಯಾಕ್ಟರಿಗಳು ಆಗಬೇಕು? ನಮ್ಮೆಲ್ಲರ ಜೀವನ ಸೇರಿದಂತೆ ಆಯುಷ್ಯವೇ ಕಡಿಮೆಯಾಗುತ್ತೆ.
ಮುಖ್ಯವಾಗಿ ಈಗಾಗಲೇ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಇದೀಗ ಮತ್ತೇ ಫ್ಯಾಕ್ಟರಿಗೆ ಅವಕಾಶ ಮಾಡಿಕೊಟ್ಟಲ್ಲಿ ನಾವೆಲ್ಲರೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ. ಯಾರೇ ಫ್ಯಾಕ್ಟರಿ ಪರವಾಗಿ ನಿಂತರೂ, ನಾನಂತೂ ಇದಕ್ಕೆ ವಿರೋಧಿಸುತ್ತೇನೆ ಎಂದು ಗವಿಸಿದ್ದೇಶ್ವರ ಸ್ವಾಮಿಜಿ, ಗಟ್ಟಿಯಾಗಿ ಫ್ಯಾಕ್ಟರಿ ವಿರುದ್ಧ ಧ್ವನಿ ಎತ್ತಿದ್ದಾರೆ.
ಇದರಿಂದ ಕೊಪ್ಪಳ ನಗರಕ್ಕೆ ಹೊಂದಿಕೊಂಡು ನಿರ್ಮಾಣವಾಗ್ತಿರೋ ಬಲ್ಡೋಟಾ ಸ್ಟೀಲ್ ಆಂಡ್ ಪವರ್ ಪ್ಲ್ಯಾಂಟ್ ಪ್ಯಾಕ್ಟರಿ ಆರಂಭಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಕೊಪ್ಪಳ ಜನತೆ ಇದೇ ಫೆಬ್ರವರಿ 24 ಕ್ಕೆ ಕೊಪ್ಪಳ ಬಂದ್ ಗೆ ಕೂಡಾ ಕರೆ ನೀಡಿದ್ದು, ಹೋರಾಟ ತೀವ್ರ ಸ್ವರೂಪ ಪಡೆಯುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.