ಗದಗ: ವಿಮೆ ಪಾವತಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಗದಗ ನಗರದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯ ಕಚೇರಿ ಸಾಮಗ್ರಿಗಳನ್ನು ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾಗಿದೆ.
ಇದೊಂದು ಅಪಘಾತ ಸಂಬಂಧಿತ ಪ್ರಕರಣವಾಗಿದ್ದು, ದಿನಾಂಕ 11-06-2023ರಂದು ಗದಗ ನಗರದ ಅಂಜುಮನ್ ಕಾಲೇಜ್ ಬಳಿಯ ರಸ್ತೆಯಲ್ಲಿ ಬೈಕ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಹನುಮಂತಪ್ಪ ಗಜೇಂದ್ರಗಡ (ವಯಸ್ಸು 56) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತಕ್ಕೆ ಕಾರಣವಾದ ಕಾರು ‘ಯುನೈಟೆಡ್ ಇಂಡಿಯಾ ಇನ್ಸುರೆನ್ಸ್’ ಕಂಪನಿಯಲ್ಲಿ ವಿಮೆ ಮಾಡಿಸಲಾಗಿತ್ತು.
ಮೃತ ಹನುಮಂತಪ್ಪ ಗಜೇಂದ್ರಗಡ ಅವರ ಕುಟುಂಬಸ್ಥರು ನಷ್ಟ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು, ಈ ಹಿನ್ನೆಲೆ ಸಂಬಂಧಿಸಿದ ಇನ್ಸುರೆನ್ಸ್ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ವಿಮಾ ಕಂಪನಿಗೆ, ಮೃತರ ಕುಟುಂಬಕ್ಕೆ ರೂ. 74 ಲಕ್ಷ ರೂಪಾಯಿ ಮೊತ್ತ ಪಾವತಿಸುವಂತೆ ಸ್ಪಷ್ಟ ಆದೇಶ ನೀಡಿತ್ತು.
ಆದರೆ, ನ್ಯಾಯಾಲಯದ ಆದೇಶ ಹೊರಬಿದ್ದ ಒಂದೆರಡು ತಿಂಗಳುಗಳಲ್ಲ, ವಿಮೆ ಮೊತ್ತ ಪಾವತಿಸಲಾಗದೆ ವರ್ಷ ಕಳೆದಿದ್ದರೂ ಕೂಡ ಕಂಪನಿ ನಿರ್ಲಕ್ಷ್ಯ ತೋರಿದ ಪರಿಣಾಮ, ನ್ಯಾಯಾಲಯದ ಆದೇಶದ ಪ್ರಕಾರ, ಕಂಪನಿಯ ಕಚೇರಿಗೆ ಜಪ್ತಿ ಕ್ರಮ ಜಾರಿಯಾಯಿತು.
ಈ ಜಪ್ತಿ ಪ್ರಕ್ರಿಯೆಯನ್ನು ಅರ್ಜಿದಾರರ ಪರವಾಗಿ ನ್ಯಾಯವಾದಿಗಳಾದ ಸಿ.ಆರ್. ವಡಕಣ್ಣವರ ಹಾಗೂ ಕೆ.ಎಂ. ಮುಶಿಗೇರಿ ಹಾಗೂ ಸಿಬ್ಬಂದಿಗಳಾದ ಎಂ.ಬಿ.ಕಂಕೂರ, ವಿ.ಎಂ.ಬೆಣಕಲ್ಲಮಠ ಅವರ ನೇತೃತ್ವದಲ್ಲಿ ನಡೆಸಲಾಯಿತು. ಜಪ್ತಿಗೆ ಸಂಬಂಧಿಸಿದಂತೆ ಕಂಪನಿಯ ಕಚೇರಿಯಿಂದ ಕಂಪ್ಯೂಟರ್, ಫರ್ನಿಚರ್ ಸೇರಿದಂತೆ ಹಲವಾರು ಕಚೇರಿ ಉಪಕರಣಗಳು ವಶಕ್ಕೆ ಪಡೆಯಲಾಯಿತು.
ಈ ಘಟನೆ ಇನ್ಸುರೆನ್ಸ್ ಕಂಪನಿಗಳ ಮೆಲೆಯೇ ವಿಶ್ವಾಸ ಹಾಗೂ ಭದ್ರತೆಯ ಕುರಿತು ಸಾರ್ವಜನಿಕ ಪ್ರಶ್ನೆಗಳನ್ನು ಎಬ್ಬಿಸಿದೆ. ಇಂತಹ ಪ್ರಕರಣಗಳು ಗ್ರಾಹಕರ ಹಕ್ಕುಗಳ ಪ್ರತಿರಕ್ಷೆಯ ಅಗತ್ಯತೆಯನ್ನು ಮತ್ತಷ್ಟು ಒತ್ತಿ ಹೇಳುತ್ತವೆ.
ವರದಿ:ಮಹಲಿಂಗೇಶ್ ಹಿರೇಮಠ.ಗದಗ