ರಜತ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚನೆ
ಗದಗ, ಡಿ.20:
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಇ ಶಾಲೆ ಸ್ಥಾಪನೆಯಾಗಿ 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ರಜತ ಮಹೋತ್ಸವದ ಅಂಗವಾಗಿ, ಶಾಲೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ‘ಬ್ಯಾಕ್ ಟು ಬೆಂಚಸ್’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ವಿದ್ಯಾಭ್ಯಾಸದ ದಿನಗಳನ್ನು ಸ್ಮರಿಸಿದ ಕ್ಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಎಸ್.ವಿ. ಸಂಕನೂರ ಅವರು ಮಾತನಾಡಿ, ಶಾಲೆ ಆರಂಭವಾಗಿ 25 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚನೆಯಾಗಿರುವುದು ಸಂತಸದ ವಿಚಾರವಾಗಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಯೊಂದಿಗೆ ಸದಾ ಉತ್ತಮ ಸಂಬಂಧ ಹೊಂದಿರುವುದು ಶ್ಲಾಘನೀಯವಾಗಿದ್ದು, ಇಂತಹ ಒಕ್ಕೂಟಗಳು ಶಾಲೆಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮತ್ತೊಬ್ಬ ಅತಿಥಿಯಾಗಿ ಉಪಸ್ಥಿತರಿದ್ದ ಶಾಲೆಯ ಮೊಟ್ಟಮೊದಲ ಮುಖ್ಯೋಪಾಧ್ಯಾಯರಾದ ಶ್ರೀಯುತ ಎಸ್.ಟಿ. ಪಾಟೀಲ ಅವರು ಶಾಲೆಯ ಆರಂಭಿಕ ದಿನಗಳ ಸವಾಲುಗಳು ಹಾಗೂ ಸಾಧನೆಗಳನ್ನು ಮೆಲುಕು ಹಾಕಿ, ಇಂದು ಶಾಲೆ ಉತ್ತಮ ಮಟ್ಟಕ್ಕೆ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಯುತ ಚೆನ್ನಯ್ಯ ಹಿರೇಮಠ ಅವರು ಮಾತನಾಡಿ, ಸಪ್ತ ಋಷಿಗಳ ಶ್ರಮದ ಫಲವಾಗಿ ತಲೆಯೆತ್ತಿದ ಕೆಎಲ್‌ಇ ಸಂಸ್ಥೆಯ ಅಂಗ ಸಂಸ್ಥೆಯಾಗಿ ಈ ಶಾಲೆ ಬೆಳೆದು ಇಂದು ಹೆಮ್ಮರವಾಗಿ ನಿಂತಿದೆ. ರಜತ ಮಹೋತ್ಸವದ ಪ್ರಯುಕ್ತ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರಚನೆಯಾಗಿರುವುದು ಶಾಲೆಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆಗಳಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಹೇಳಿದರು. ಶಾಲೆಯ ಪ್ರಗತಿ ಇನ್ನೂ ಉತ್ತರೋತ್ತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಲ್ಪನಾ ಚಚಡಿ ಅವರು ಮಾತನಾಡಿ, ಶಾಲೆಯ ಬೆಳವಣಿಗೆಗೆ ಸಹಾಯ–ಸಹಕಾರ ನೀಡಿದ ಎಲ್ಲ ಗಣ್ಯರು, ಶಿಕ್ಷಕ ವೃಂದ, ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲಾ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡಿದ ಪತ್ರಿಕಾ ಮಾಧ್ಯಮದ ಸನ್ಮಿತ್ರರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಹಾಗೂ ಸರ್ಕಾರಿ ಸೇವೆಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯದರ್ಶಿ ಶ್ರೀ ಶಶಾಂಕ ಗಜಕೋಶ ಹಾಗೂ ಸಹ ಕಾರ್ಯದರ್ಶಿ ಶ್ರೀ ಜಾಫರ್ ಸಾಧಿಕ್ ಹೊಂಬಳ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
‘ಬ್ಯಾಕ್ ಟು ಬೆಂಚಸ್’ ಕಾರ್ಯಕ್ರಮವು ಹಳೆಯ ನೆನಪುಗಳನ್ನು ಜೀವಂತಗೊಳಿಸುವ ಜೊತೆಗೆ ಶಾಲೆ–ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ ವಿಶಿಷ್ಟ ಕಾರ್ಯಕ್ರಮವಾಗಿ ಮೂಡಿಬಂದಿತು.
