ಗದಗ : ಮಕ್ಕಳ ಭಿಕ್ಷಾಟನೆ, ದೌರ್ಜನ್ಯ ಹಾಗೂ ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯಗಳು ಹಾಗೂ ಅವರ ಹಕ್ಕುಗಳ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿಯ ವಿಷಯ ನಿರ್ವಾಹಕರಾದ ಶ್ರೀಮತಿ ಗಿರಿಜಾ ಹಿರೇಮಠ ಹೇಳಿದರು.
ನಗರದ ಸ್ಟುಡೆಂಟ್ಸ್ ಎಜುಕೇಶನ್ ಸೊಸೈಟಿಯ ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಮಕ್ಕಳ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆಧುನಿಕ ದಿನಗಳಲ್ಲಿ ಮಕ್ಕಳ ಮೇಲೆ ಉಂಟಾಗುತ್ತಿರುವ ವಿವಿಧ ರೀತಿಯ ದೌರ್ಜನ್ಯಗಳನ್ನು ತಡೆಗಟ್ಟುವುದು ಹಾಗೂ ಇದಕ್ಕಾಗಿ ಇರುವ ಕಾನೂನುಗಳ ಕುರಿತು ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ. ವಿಶ್ವಸಂಸ್ಥೆಯು ೧೯೮೯ರಲ್ಲಿ ಅನೇಕ ದೇಶಗಳ ಒಡಂಬಡಿಕೆಯೊಂದಿಗೆ ಮಕ್ಕಳ ಹಕ್ಕುಗಳನ್ನು ಜಾರಿಗೊಳಿಸಿದ್ದು, ಅವುಗಳಲ್ಲಿ ವಿಶೇಷವಾಗಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು ಹಾಗೂ ಭಾಗವಹಿಸುವ ಹಕ್ಕುಗಳು ಪ್ರಮುಖವಾಗಿವೆ. ವಿದ್ಯಾರ್ಥಿಗಳು ತಮಗೆ ತಮ್ಮ ನೆರೆಹೊರೆಯಲ್ಲಿ ಇಂಥ ಹಕ್ಕುಗಳಿಂದ ವಂಚಿತರಾಗಿದ್ದರೆ ೧೦೯೮/೧೧೨ ಗೆ ಕರೆ ಮಾಡಿ ಪರಿಹಾರ ಪಡೆಯಬೇಕೆಂದು ಮನವಿ ಮಾಡಿದರು.
ಆಪ್ತ ಸಮಾಲೋಚಕರಾದ ಶ್ರೀಮತಿ ಕಲಾವತಿ ಹಡಪದ ಮಾತನಾಡಿ, ಮಕ್ಕಳ ಉನ್ನತೀಕರಣಕ್ಕಾಗಿ ವಿವಿಧ ಸಂಘ-ಸಂಸ್ಥೆಗಳು ವಿಶೇಷ ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮತಿ, ಮಕ್ಕಳ ವಿಶೇಷ ಪೊಲೀಸ್ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ೧೦೯೮/೧೧೨ ಇವುಗಳ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಕಟಿಬದ್ಧವಾಗಿವೆ. ಮಕ್ಕಳನ್ನು ಯಾವುದೇ ರೀತಿ ದೌರ್ಜನ್ಯಕ್ಕೆ ಒಳಪಡಿಸಿದರೆ ಜೀವಾವಧಿ ಶಿಕ್ಷೆಯಂಥ ಕಠಿಣ ಕಾನೂನುಗಳು ಜಾರಿಯಲ್ಲಿದ್ದು, ಇಂಥ ಅಪರಾಧ ಪ್ರಕರಣಗಳನ್ನು ಉದಾಹರಿಸಿ ಇಂಥ ಘಟನೆಗಳು ಗೌಪ್ಯವಾಗಿದ್ದರೂ ಅವುಗಳನ್ನು ಬೆಳಕಿಗೆ ತರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಸನ್ಮಾರ್ಗ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಪ್ರೇಮಾನಂದ ರೋಣದ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು, ಮಕ್ಕಳ ಹಕ್ಕುಗಳನ್ನು ಗೌರವಿಸಿ ಅವರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವುದು ಇಂದಿನ ದಿನಮಾನದ ಅನಿವಾರ್ಯತೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದು ಕೇವಲ ಸರ್ಕಾರದ ಕಾರ್ಯ ಎಂದು ಭಾವಿಸದೆ ಪ್ರತಿ ನಾಗರಿಕನೂ ಇದನ್ನು ಹೊಣೆ ಎಂದು ಪರಿಗಣಿಸಬೇಕು ಎಂದರು.
ವೇದಿಕೆ ಮೇಲೆ ಸ್ಟುಡೆಂಟ್ ಎಜುಕೇಶನ್ ಸೊಸೈಟಿ ಚೇರಮನ್ನರಾದ ಪ್ರೊ.ರಾಜೇಶ ಕುಲಕರ್ಣಿ, ಸದಸ್ಯರಾದ ಪ್ರೊ.ರೋಹಿತ್ ಒಡೆಯರ, ಪ್ರೊ.ರಾಹುಲ್ ಒಡೆಯರ, ಪ್ರೊ.ಪುನೀತ್ ದೇಶಪಾಂಡೆ, ಪ್ರೊ.ಸೈಯದ್ ಮತೀನ್ ಮುಲ್ಲಾ, ಆಡಳಿತಾಧಿಕಾರಿಗಳಾದ ಮೃತ್ಯುಂಜಯ ಹಿರೇಮಠ ಉಪಸ್ಥಿತರಿದ್ದರು. ಕಾಮರ್ಸ್ ವಿಭಾಗದ ಹಿರಿಯ ಉಪನ್ಯಾಸಕರಾದ ಪ್ರೊ.ಶಿವಕುಮಾರ ವಜ್ರಬಂಡಿ ಸ್ವಾಗತಿಸಿದರು. ಪ್ರೊ.ಪರಶುರಾಮ ಕೋಟ್ನೆಕಲ್ ನಿರೂಪಿಸಿ ವಂದಿಸಿದರು. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.