ಗದಗ: “ವಾಯು ಪಡೆಯೆಂದರೆ ಯುದ್ಧ ಮಾತ್ರವಲ್ಲ ಅದೊಂದು ಅಭಿಮಾನದ ದೇಶ ಸೇವೆ”ಎಂದು ದೆಹಲಿ ವಾಯು ಪಡೆಯ ಅಧಿಕಾರಿಗಳಾದ ಶ್ರೀ ಬಿಪಿನ್ ವಿ. ಪಾಟೀಲ ಅವರು ಹೇಳಿದರು.
ನಗರದ ಚಿಕ್ಕಟ್ಟಿ ಶಾಲಾ-ಕಾಲೇಜುಗಳಲ್ಲಿ ವಾಯುದಳದ ಕುರಿತು ಅಭಿಪ್ರೇರಣಾ ಕಾರ್ಯಕ್ರಮ – ೦೨ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಾಯುಪಡೆ ಎಂದಾಕ್ಷಣ ಮಕ್ಕಳ ಮನದಲ್ಲಿ ಬರುವ ವಿಚಾರ, ಅದು ಕೇವಲ ಯುದ್ಧ ಮಾಡುವುದು ಎಂದರ್ಥ ಅಷ್ಟೇ ಅಲ್ಲ ಎನ್ನುವ ಗುಣ ನಮ್ಮಲ್ಲಿರಬೇಕು.ವಾಯು ಪಡೆಯಲ್ಲಿ ದೇಶ ಸೇವೆ ಸಲ್ಲಿಸಬೇಕೆನ್ನುವವರು ದೈಹಿಕವಾಗಿ ಸಧೃಡವಾಗಿದ್ದು, ಆರೋಗ್ಯವಂತರಾಗಿರಬೇಕು. ಆಕಾಶಕಾಯಗಳ ಕುರಿತು ಕನಸನ್ನು ಹೊಂದಿರಬೇಕು. ಆ ಕನಸನ್ನು ನನಸಾಗಿಸಿಕೊಳ್ಳುವ ಛಲ ಇರಬೇಕು. ವರ್ತಮಾನದ ದಿನ ಪತ್ರಿಕೆಗಳನ್ನು ದಿನಾಲೂ ಓದುವ ಹವ್ಯಾಸ ರೂಢಿಸಿಕೊಳ್ಳಿರಿ. ಜೀವನದಲ್ಲಿ ಗುರಿ ಇಟ್ಟುಕೊಳ್ಳಿ, ಆ ಗುರಿ ತಲುಪುವ ಯೋಜನೆಯನ್ನು ರೂಪಿಸಿಕೊಳ್ಳಿ, ಯೋಜನೆಯ ಪ್ರಕಾರ ಕಾರ್ಯಪ್ರವೃತ್ತರಾಗಿರಿ. ತಾವು ಅಂದುಕೊಂಡ ಗುರಿಯನ್ನು ಸುಲಭವಾಗಿ ತಲುಪುವಿರಿ ಎಂದು ಹೇಳಿದರು.
ವಿದ್ಯಾರ್ಥಿಗಳಾದ ತಾವು ಯಾವುದೇ ರೀತಿಯ ವ್ಯಸನಗಳಿಂದ ದೂರವಿರಬೇಕು. ಆರೋಗ್ಯಕ್ಕೆ ಹಿತಕರವಾದ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ದಿನಾಲೂ ಬೆಳಿಗ್ಗೆ ಮತ್ತು ಸಾಯಂಕಾಲ ರನ್ನಿಂಗ್, ಜಾಗಿಂಗ ಮಾಡುತ್ತ ಸದೃಡವಾಗಿರಿ. ವಾಯುಪಡೆ ಸೇರಿದ ನಂತರ ಪ್ರಪಂಚದಾದ್ಯಂತ ಸಂಚರಿಸಿ ಜಗತ್ತನ್ನು ನೋಡುವ ವಿವಿಧ ದೇಶ, ಭಾಷೆ ಅಲ್ಲಿಯ ಸಂಸ್ಕೃತಿಯನ್ನು ತಿಳಿಯಬಹುದು. ವಾಯುಪಡೆಯಲ್ಲೂ ಅನೇಕ ಸಾಹಸಗಳನ್ನು ಮಾಡಿ, ಸಾಹಸಿಗರಾಗಿ ದೇಶಕ್ಕೆ ತಮ್ಮಿಂದ ಕೀರ್ತಿ ತರುವಂತ ಸಾಧಕರಾಗಬಹುದು. ದೇಶದ ಯಾವುದೆ ದಳವಾಗಲಿ ವಾಯುದಳ, ನೌಕಾದಳ ಅಥವಾ ಭೂದಳಗಳಲ್ಲಿ ಸೇರುವದರಿಂದ ದೇಶಭಕ್ತಿ, ಶಿಸ್ತು, ಸಂಯಮ, ಸಮಯಪ್ರಜ್ಞೆ ಎಲ್ಲವನ್ನು ಪಡೆದು ತಮ್ಮ ಜೀವನದ ಶೈಲಿಯೇ ಬದಲಾಗಿ ಎಲ್ಲರೂ ಗೌರವಿಸುವಂತ ವ್ಯಕ್ತಿಗಳಾಗುತ್ತಿರಿ. ವಾಯುಪಡೆಯ ನಾಗರಿಕನಾಗಿ ಸೇರ್ಪಡೆಗೊಂಡು (ಬಡ್ತಿ) ಉನ್ನತಿಯನ್ನು ಪಡೆದು ಏರ್‌ಮ್ಯಾನ್ ಹುದ್ದೆ ಅಲಂಕರಿಸಿ ದ್ವಿತೀಯ ಉನ್ನತಿಯನ್ನು ಪಡೆದು ವಾಯುಪಡೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಬಹುದು. ಒಟ್ಟಾರೆಯಾಗಿ ಎಲ್ಲರೂ ಗೌರವಿಸುವಂತ ಭಾರತದ ಹೆಮ್ಮಯ ಸೈನಿಕ ಎಂಬ ಸ್ಥಾನದಲ್ಲಿರುತ್ತೀರಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಾಯುಪಡೆಯ ಅಧಿಕರಿಗಳಾದ ಶ್ರೀ ಬಿಪಿನ್ ವ್ಹಿ. ಪಾಟೀಲ ಅವರ ತಂದೆಯವರಾದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಭೌತಶಾಸ್ತ್ರ ವಿಷಯದ ಪಂಡಿತರಾದ ಪ್ರೋ. ವ್ಹಿ. ಎಸ್. ಪಾಟೀಲ ಗುರುಗಳು ಮಾತನಾಡಿ, ಭೌತಶಾಸ್ತ್ರದ ವಿಜ್ಞಾನಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಥಾಮಸ್ ಅಲ್ವಾ ಎಡಿಸನ್ ಅವರು ತಿಳಿಸುವ ಹಾಗೆ ಯಾವುದೇ ಸಂಶೋಧನೆಯಾಗಲಿ, ಕಾರ್ಯವಾಗಲಿ ಒಂದೇ ಬಾರಿಗೆ ಯಶಸ್ವಿಯಾಗುವುದಿಲ್ಲ, ಹಾಗಂತ ಪ್ರಯತ್ನ ಬಿಡದೆ ಕಾರ್ಯ ಮುಂದುವರಸಿ ಎಂದು ಹೇಳಿದ್ದಾರೆ. ಛಲದೊಂದಿಗೆ, ಸತತ ಪ್ರಯತ್ನ ಮಾಡ್ತಾ, ಕಾರ್ಯವನ್ನು ಸಂಪೂರ್ಣಗೊಳಿಸಬೇಕು. ಸೋತನೆಂದು ಕುಗ್ಗದೆ, ಗೆಲ್ಲುವವರೆಗೂ ಹಿಗ್ಗಿನಿಂದ ಬಿಡದೇ ಕಾರ್ಯ ಮಾಡಿರಿ ಎಂದರು.
ದೆಹಲಿಯಲ್ಲಿ ವಿಜ್ಯುವಲ್ ಡಿಜೈನರ್ ಆಗಿ ಕೆಲಸಮಾಡುತ್ತಿರುವ ವಾಯುಪಡೆಯ ಅಧಿಕಾರಿಗಳಾದ ಶ್ರೀ ಬಿಪಿನ್ ವ್ಹಿ. ಪಾಟೀಲ ಅವರ ಮಗಳಾದ ಕುಮಾರಿ ಮನಸ್ವಿ ಬಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಾದ ನೀವು ನಿಮಗೆ ಇಷ್ಟವಾದ ವಿಷಯವನ್ನು ಆಯ್ಕೆಮಾಡಿಕೊಂಡು ಓದಿ ನಿಮ್ಮ ಗುರಿ ತಲುಪಬಹುದು. ತಂದೆ ತಾಯಿ ತಮ್ಮ ಮಕ್ಕಳ ಕುರಿತು ಡಾಕ್ಟರ್ ಇಂಜನೀಯರ್ ಆಗಬೇಕೆಂದು ಬಯಸುತ್ತಾರೆ. ಆದರೆ ನನ್ನ ತಂದೆ ಹಾಗೆನ್ನದೆ ನಿನಗೆ ಇಷ್ಟವಾದ ವಿಷಯವನ್ನೆ ಓದಬಹುದೆಂದು ಹೇಳಿದಾಗ ನಾನು ಬಿ.ಟೆಕ್. ನಲ್ಲಿ ವಿಜ್ಯುವಲ್‌ನಲ್ಲಿ ಡಿಜೈನ ಆಯ್ಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.
ಅಧ್ಯಕ್ಷರಾದ ಪ್ರೋ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡಿ, ಈ ದಿನ ನಾನು ಬಹಳ ಸಂತೋಷಗೊಂಡಿರುವೆ ಯಾಕೆಂದರೆ ನನ್ನ ಗುರುಗಳಾದ ಮಾರ್ಗದರ್ಶಕರಾದಂತಹ ಕರ್ನಾಟಕ ವಿಶ್ವ ವಿದ್ಯಾಲಯದ ನಿವೃತ್ತ ಭೌತಶಾಸ್ತ್ರದ ವಿಷಯದ ಪಂಡಿತರಾದ ಪ್ರೋ. ವಿ. ಎಸ್. ಪಾಟೀಲ ಅವರು ಆಗಮಿಸಿದ್ದಾರೆ. ನಾನು ಧಾರವಾಡದಲ್ಲಿ ಅವರ ಮನೆಯಲ್ಲಿದ್ದು ಎಮ್. ಎಸ್ಸಿ. ವಿದ್ಯಾಭ್ಯಾಸ ಮಾಡಿರುವೆ. ಹಾಗೆ ನಾನು ಅವರ ಮಕ್ಕಳಿಗೆ ಕಲಿಸುವುದರೊಂದಿಗೆ ನನ್ನ ಓದಿನ ಜೀವನ ಮುಂದುವರಿಸಿದೆ, ಅವರಿಗೀಗ ತೊಂಭತ್ನಾಲ್ಕು ವರ್ಷ ಆದರೂ ಎಷ್ಟೊಂದು ಚೈತನ್ಯ ಭರಿತರಾಗಿ, ಆರೋಗ್ಯಕರವಾಗಿದ್ದಾರೆ. ಈ ವಯಸ್ಸಿನಲ್ಲಿ ಅವರಂತೆ ಇರುವವರು ಕಡಿಮೆ. ಆರೋಗ್ಯದ ಮೂಲ ನಗು ಎನ್ನುವ ಹಾಗೆ ಅವರು ಸದಾ ಹಸನ್ಮುಖಿಗಳಾಗಿ ನಗುಮುಖದೊಂದಿಗೆ ಪಾಠ ಮಾಡುತ್ತಾರೆ. ನಾವು ಆರೋಗ್ಯವಂತರಾಗಿರಲು ಹೇಗೆ ಜೀವಿಸಬೇಕು ಎನ್ನುವವರಿಗೆ ಪ್ರೋ. ವಿ. ಎಸ್. ಪಾಟೀಲ ಗುರುಗಳು ನಿದರ್ಶನದಂತಿದ್ದಾರೆ. ಅತಂಹ ಗುರುಗಳಿಂದ ಪ್ರಭಾವಿತನಾಗಿ ಇಷ್ಟೆಲ್ಲಾ ಕಾರ್ಯಗಳನ್ನು ಮಾಡುವಂತಾಯಿತು ಎಂದರು.
ನಿವೃತ್ತ ಪ್ರೊ. ವ್ಹಿ. ಎಸ್. ಪಾಟೀಲ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ವತ್ಸಲಾ ಪಾಟೀಲ ದಂಪತಿಗಳಿಗೆ ಮತ್ತು ವಾಯು ಪಡೆಯ ಅಧಿಕಾರಿಗಳಾದ ಶ್ರೀ ಬಿಪಿನ್ ವಿ. ಪಾಟೀಲ ಹಾಗೂ ಅವರ ಸುಪುತ್ರಿಯಾದ ಕುಮಾರಿ ಮನಸ್ವಿ ಬಿ. ಪಾಟೀಲ ವಿಜ್ಯುವಲ್ ಡಿಸೈನರ್ ಅವರನ್ನು ಚಿಕ್ಕಟ್ಟಿ ಸಂಸ್ಥೆಯ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಮಾಹೆರಾ ಹೆಸರೂರು ಹಾಗೂ ಉಮೆರೂಮಾನ ಶಿರಹಟ್ಟಿಯವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರೆ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಸಫಿಯಾ. ಎ. ಅಣ್ಣಿಗೇರಿ ಹಾಗೂ ಸೈಯದಾ ಸೋಪಿನಾಜ್ ಎಸ್. ಬಳ್ಳಾರಿಯವರು ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ಸಂಗೀತ ಶಿಕ್ಷಕರಾದ ಶ್ರೀ ರಾಕೇಶ ಕುಲಕರ್ಣಿಯವರು ಪ್ರಾರ್ಥನಾ ಗೀತೆ ಹಾಡಿದರೆ, ಪ್ರಾಚಾರ್ಯರಾದ ಶ್ರೀ. ಬಿಪಿನ್ ಎಸ್. ಚಿಕ್ಕಟ್ಟಿಯವರು ಸ್ವಾಗತ ಕೋರಿದರು. ಶಿಕ್ಷಕಿಯರಾದ ಶ್ರೀಮತಿ ರಜನಿ ಕುರಿ ಅವರು ವಂದರ್ನಾಪಣೆ ಗೈದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಮುಖ್ಯೋಪಾಧ್ಯಯನಿಯರಾದ ಶ್ರೀಮತಿ ರಿಯಾನಾ ಮುಲ್ಲಾ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.