ಗದಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಸುಗ್ರೀವಾಜ್ಞೆ ಮೂಲಕ ಆದೇಶ ಹೊರಡಿಸಿ, ಬಡ್ಡಿದಂಧೆಕೋರರಿಗೆ ಮೂಗುದಾರ ಹಾಕಿದೆ.ಇದೇ ವಿಷಯವಾಗಿ ಗದಗ ನಗರದ ಪತ್ರಿಕಾ ಭವನದಲ್ಲಿಂದು ಸೌಜನ್ಯ ಹೋರಾಟ ಸಮಿತಿ ಮತ್ತು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಗಿರೀಶ ಮಟ್ಟಣ್ಣವರ ಪತ್ರಿಕಾ ಗೋಷ್ಟಿ ನಡೆಸಿದರು. ಇವರ ಜೊತೆಗೆ ಜಿಲ್ಲೆಯ ಕೆಲವು ರೈತ ಮುಖಂಡರು ಸಾತ್ ನೀಡಿದ್ದರು.
ಪತ್ರಿಕಾ ಗೋಷ್ಟಿಯಲ್ಲಿ, ಸರ್ಕಾರದ ಸುಗ್ರೀವಾಜ್ಞೆಯ ಆದೇಶದ ಕುರಿತು ಮಾತನಾಡಿದ, ಗಿರೀಶ ಮಟ್ಟಣ್ಣವರ, (SKDRDP) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪುಗಳ ಮೂಲಕ ಹಾಗೂ ವಿವಿಧ ಫೈನಾನ್ಸ್ ಗಳ ವಿರುದ್ಧ ಸಾಲ ನೀಡುವ ವಿಷಯವಾಗಿ ಮಾತನಾಡಿದರು.
ಸಾಲದ ಮೂಲಕ ಗ್ರಾಮೀಣ ಭಾಗದ ಮುಗ್ಧ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಫೈನಾನ್ಸ್ ಗಳು ಅನ್ಯಾಯವೆಸಗುತ್ತಿವೆ. ಹೀಗಾಗಿ ಸರ್ಕಾರದ ಸುಗ್ರೀವಾಜ್ಞೆ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದಂತೆ, ಲೈಸೆನ್ಸ್ ಪಡೆಯದೇ ಸಾಲ ನೀಡಿರುವ ಅನಧಿಕೃತ ಫೈನಾನ್ಸ್ ಗಳಿಂದ ಸಾಲ ತೆಗೆದುಕೊಂಡಿರುವವರು ಇನ್ನು ಮುಂದೆ ಅಸಲು ಸೇರಿದಂತೆ ಬಡ್ಡಿಯನ್ನ ಕಟ್ಟುವದನ್ನ ನಿಲ್ಲಿಸಬೇಕು. ಅಲ್ಲದೇ ಫೈನಾನ್ಸ್ ಗಳು ಸಾಲಗಾರರಿಗೆ ಯಾವುದೇ ರೀತಿ ಕಿರುಕುಳ ಕೊಡುವಂತಿಲ್ಲ, ವಸೂಲಿ ಮಾಡುವಂತಿಲ್ಲ ಅನ್ನೋದನ್ನ ಸ್ಪಷ್ಟವಾಗಿ ತಿಳಿಸಲಾಗಿದೆ.

ಹೀಗಿದ್ದೂ ಇಂದು ಬೆಳಿಗ್ಗೆವರೆಗೂ ಫೈನಾನ್ಸ ಗಳು ಸಾಲಗಾರರ ಮನೆ ಕದ ತಟ್ಟುತ್ತಿವೆ. ಹೀಗಾಗಿ ಸರ್ಕಾರದ ನಿಯಮಗಳನ್ನ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಿ ಅನುಷ್ಠಾನಕ್ಕೆ ತರುವ ಮೂಲಕ, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮಹಿಳೆಯರ ಹೈಡ್ರಾಮಾ!
ಪತ್ರಿಕಾ ಗೋಷ್ಟಿ ಮುಗಿಸಿ ಹೊರಗಡೆ ಬಂದ ಗಿರೀಶ ಮಟ್ಟಣ್ಣವರಗೆ ಹಾಗೂ ಅವರ ಬೆಂಬಲಿಗರಿಗೆ ಶಾಕ್ ಕಾದಿತ್ತು. ಧರ್ಮಸ್ಥಳ ಯೋಜನೆ ವಿರುದ್ಧ ಪತ್ರಿಕಾ ಗೋಷ್ಟಿ ನಡೆಸಲು ಬಂದಿದ್ದವರಿಗೆ, ಧರ್ಮಸ್ಥಳ ಸಂಘದ ನೂರಾರು ಮಹಿಳಾ ಪ್ರತಿನಿಧಿಗಳು ಮುತ್ತಿಗೆ ಹಾಕಲು ಯತ್ನಿಸಿದರು. ಧರ್ಮಸ್ಥಳ ಸ್ವಸಹಾಯ ಸಂಘಗಳಿಂದ ನಾವೆಲ್ಲ ಬದುಕು ಕಟ್ಟಿಕೊಂಡಿದ್ದೇವೆ. ಅದರಿಂದ ನಮಗೆಲ್ಲ ಒಳ್ಳೆಯದೇ ಆಗಿದೆ. ನಮ್ಮ ಸಂಘದ ವಿರುದ್ಧ ಮಾತನಾಡುವರು ನಮ್ಮ ಸಾಲವನ್ನೇನಾದ್ರೂ ಮನ್ನಾ ಮಾಡುತ್ತಾರಾ? ಇದು ಧರ್ಮಸ್ಥಳದ ವಿರೇಂದ್ರ ಹೆಗ್ಡೆ ಅವರಿಗೆ ಹಾಗೂ ನಮ್ಮ ಸಂಘಕ್ಕೆ ಅಪಪ್ರಚಾರ ಮಾಡುವ ಉದ್ದೇಶದಿಂದಲೇ ಈ ರೀತಿ ಪತ್ರಿಕಾ ಗೋಷ್ಟಿ ನಡೆಸುತ್ತಾ ಹೊರಟಿದ್ದಾರೆ. ಹೀಗಾಗಿ ಗಿರೀಶ ಮಟ್ಟಣ್ಣವರನ್ನ ಹೊರಗೆ ಕಳುಹಿಸಿ, ಅವರಿಗೆ ನಾವು ಉತ್ತರ ಕೊಡುತ್ತೇವೆ ಎಂದು ರೊಚ್ಚಿಗೆದ್ದ ಮಹಿಳೆಯರು ಎರೆಡ್ಮೂರು ಗಂಟೆಗಳ ಕಾಲ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.
ಶಹರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣ ತರುವ ಮೂಲಕ, ಮಹಿಳೆಯರ ಮನವೊಲಿಸಲು ಮುಂದಾದರು. ಪಟ್ಟು ಬಿಡದ ಮಹಿಳೆಯರು ಉರಿಬಿಸಿಲಿನಲ್ಲಿ ಪತ್ರಿಕಾ ಭವನದ ಎದುರಿನ ರಸ್ತೆ ಮೇಲೆ ಕುಳಿತು ಪ್ರತಿಭಟನೆ ಮುಂದುವರೆಸಿದರು.
ಇನ್ನು ಪತ್ರಿಕಾ ಗೋಷ್ಟಿ ನಡೆಸಲು ಬಂದು ಪೇಚಿಗೆ ಸಿಲುಕಿದ ಗಿರೀಶ ಮಟ್ಟೆಣ್ಣವರ ಹಾಗೂ ಮುಖಂಡರಿಗೆ ಪೊಲೀಸರು ರಕ್ಷಣೆ ಕೊಡಬೇಕಾಯಿತು. ಶಹರ ಠಾಣೆ ಸಿಪಿಐ ಡಿ.ಬಿ.ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೆ ಮೊಕ್ಕಾಂ ಹೂಡಿ, ಮಹಿಳೆಯರನ್ನ ಮನವೊಲಿಸುವಲ್ಲಿ ಹರಸಾಹಸ ಪಡಬೇಕಾಯಿತು. ಇದೇ ವೇಳೆ ಮಹಿಳೆಯರು ಗಿರೀಶ ಮಟ್ಟಣ್ಣನವರ ಜೊತೆಗೆ ಆಗಮಿಸಿದ್ದ ರೈತ ಮುಖಂಡರನ್ನೂ ತರಾಟೆಗೆ ತೆಗೆದುಕೊಂಡರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಾಗಿತ್ತು.
ಕೊನೆಗೂ ಸ್ಥಳದಲ್ಲಿದ್ದ ಮಹಿಳೆಯರನ್ನ ಚದುರಿಸಿ ಪೊಲೀಸರ ರಕ್ಷಣೆಯಲ್ಲಿದ್ದ ಗಿರೀಶ ಮಟ್ಟಣ್ಣವರ ಹಾಗೂ ಅವರ ಸಂಗಡಿಗರನ್ನ ಪೊಲೀಸರ ಭದ್ರತೆಯೊಂದಿಗೆ ಪತ್ರಿಕಾ ಭವನದಿಂದ ಹೊರಗೆ ಕಳುಹಿಸಿಕೊಡಲಾಯಿತು.