ಗದಗ: ಸಾಮಾನ್ಯವಾಗಿ ಮನೆ, ಅಂಗಡಿ, ಬ್ಯಾಂಕ್ ಸೇರಿದಂತೆ ಜನನಿಬೀಡ ಪ್ರದೇಶಗಳಲ್ಲಿ ಕಳ್ಳತನ ಆಗಿರುವದನ್ನ ನೋಡಿದ್ದೀರಾ…ಕೇಳಿದ್ದೀರಾ.! ಆದರೆ ನಂಬಲೂ ಅಸಾಧ್ಯವೆನ್ನುವಂತೆ, ಪೊಲೀಸ್ ಠಾಣೆಯಲ್ಲೇ, ಪೊಲೀಸರ ಮುಂದೆಯೇ, ಪೊಲೀಸರ ಮೊಬೈಲನ್ನೇ ಕಳ್ಳತನ ಮಾಡಿರೋ ಘಟನೆ ಗದಗ ನಗರದ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಆದರೆ ಪೊಲೀಸ್ ಠಾಣೆ ಅಧಿಕಾರಿಗಳ ಪ್ರಕಾರ,ಇದು ಕಳ್ಳತನವಲ್ಲ. ಅಜಾಗರೂಕತೆಯಿಂದ ನಡೆದ ಘಟನೆ ಎಂದು ಹೇಳಲಾಗಿದೆ.
ಹೋಟೆಲ್ ಒಂದರಲ್ಲಿ ನಡೆದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ಬಿಲ್ ಕೊಡದೆ ಗಲಾಟೆ ಮಾಡಿಕೊಂಡಿದ್ದ ವ್ಯಕ್ತಿಯ ಪರವಾಗಿ, ಮುಲ್ಲಾ ಅನ್ನುವಾತ ಪೊಲೀಸ್ ಸ್ಟೇಷನ್ ಗೆ ಬಂದಿದ್ದನು. ಈ ವೇಳೆ ಒಳಗೆ ವಿಚಾರಣೆ ನಡೆಯುತ್ತಿದ್ದಾಗ ಆಚೆ ನಿಂತು ಮಹಿಳಾ ಪೊಲೀಸ್ ಪೇದೆಯೊಬ್ಬರ ಜೊತೆ ಸ್ವಲ್ಪ ಹೊತ್ತು ಮಾತನಾಡುತ್ತಾ ನಿಂತಿದ್ದಾನೆ. ಹೀಗೆ ಮಾತನಾಡುತ್ತಾ ಮಹಿಳಾ ಪೊಲೀಸ್ ಸಿಬ್ಬಂದಿಯ ಗಮನ ಬೇರೆಡೆ ಸೆಳೆದ ಖದೀಮ, ಸಾವಕಾಶವಾಗಿ ಟೇಬಲ್ ಮೇಲಿದ್ದ ಮೊಬೈಲ್ ನ್ನ ತನ್ನ ಕಿಸೆಗೆ ಇಳಿಸಿದ ದೃಶ್ಯ, ಪೊಲೀಸ್ ಠಾಣೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

ಆದರೆ ಪೊಲೀಸ್ ಠಾಣೆಯ ಅಧಿಕಾರಿವರ್ಗ ಹೇಳುವ ಪ್ರಕಾರ, ಇದು ಉದ್ದೇಶಪೂರಿತ ಕಳ್ಳತನವಲ್ಲ. ಮುಲ್ಲಾ ಅನ್ನುವ ವ್ಯಕ್ತಿ ಸ್ಟೇಶನ್ ಗೆ ಬಂದ ಸಮಯದಲ್ಲಿ ನಮ್ಮ ಸಿಬ್ಬಂದಿ ಜೊತೆ ಮಾತನಾಡುತ್ತಾ, ತನ್ನ ಮೊಬೈಲ್ ನ್ನ ಟೇಬಲ್ ಮೇಲಿಟ್ಟಿದ್ದ. ಜೊತೆಗೆ ನಮ್ಮ ಸಿಬ್ಬಂದಿಯ ಮೊಬೈಲ್ ಫೋನ ಸಹ ಅದೇ ಟೇಬಲ್ ಮೇಲಿತ್ತು. ಎರೆಡೂ ಫೋನಗಳು ಟೇಬಲ್ನಲ್ಲಿದ್ದಾಗ ತನ್ನ ಮೊಬೈಲ್ ನ್ನ ಮೊದಲು ಕಿಸೆಯಲ್ಲಿಟ್ಟುಕೊಂಡಿದ್ದಾನೆ.
ಆನಂತರ ಸ್ವಲ್ಪ ಹೊತ್ತು ಬಿಟ್ಟು, ಟೇಬಲ್ ಮೇಲಿದ್ದ ಪೊಲೀಸ್ ಸಿಬ್ಬಂದಿಯ ಮೊಬೈಲ್ ನ್ನೂ ಕೂಡ, ತನ್ನದೇ ಎಂದು ಭಾವಿಸಿ ತನ್ನ ಕಿಸೆಗಿಳಿಸಿದ್ದಾನೆ. ನಂತರ ಇದನ್ನರಿತ ಮುಲ್ಲಾ, ತಾನು ಪೊಲೀಸರ ಮೊಬೈಲ್ ನ್ನೇ ಕಿಸೆಯಲ್ಲಿಟ್ಟುಕೊಂಡು ಬಂದಿದ್ದೇನೆ ಎಂದು ಭಯಗೊಂಡು, ತನ್ನ ಸ್ನೇಹಿತರ ಮೂಲಕ, ಸಿಬ್ಬಂದಿಯ ಮೊಬೈಲ್ ನಾನು ತೆಗೆದುಕೊಂಡು ಬಂದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿ, ಮೊಬೈಲ್ ಮರಳಿಸಿದ್ದಾನೆ ಎನ್ನಲಾಗಿದೆ.
ಒಟ್ನಲ್ಲಿ ಸದ್ಯ ಪೊಲೀಸ್ ಠಾಣೆಯಲ್ಲಿ, ಮಹಿಳಾ ಪೊಲೀಸ್ ಎದುರೇ, ಟೇಬಲ್ ಮೇಲಿದ್ದ ಮೊಬೈಲ್ ನ್ನ, ಮುಲ್ಲಾ ತನ್ನ ಕಿಸೆಗೆ ಇಳಿಸುತ್ತಿರುವ ಸಿಸಿಟಿವಿ ದೃಶ್ಯವಂತೂ ಎಲ್ಲೆಡೆ ವೈರಲ್ ಅಗಿದೆ.