ಗದಗ: ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನಾಗಿರುವಂತೆ ಅನ್ವರ್ ಮಣಿಪ್ಪಾಡಿಗೆ ವಿಜಯೇಂದ್ರ 150 ಕೋಟಿ ಆಮೀಷ ಒಡ್ಡಿರೋ ವಿಚಾರವಾಗಿ,ನಿನ್ನೆಯಷ್ಟೇ ಸಿಎಂ ಸಿದ್ಧರಾಮಯ್ಯ ಬಿ.ವೈ. ವಿಜಯೇಂದ್ರ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದರು.
ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಣಿಪ್ಪಾಡಿಗೆ ವಿಜಯೇಂದ್ರ ಆಮೀಷ ಒಡ್ಡಿದ್ದರು. ಈ ಬಗ್ಗೆ ಅನ್ವರ್ ಮಣಿಪ್ಪಾಡಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದಿದ್ದಾರೆ. ಮೋದಿಯವರು ಈ ಪತ್ರವನ್ನ ಗಂಭೀರವಾಗಿ ಸ್ವೀಕರಿಸಿ,ತಕ್ಷಣ CBI ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದ್ದರು.
ಆದರೆ ಸ್ವತಃ,ಅನ್ವರ್ ಮಣಿಪ್ಪಾಡಿ ಅವರೇ, ಸಿಎಂ ಆರೋಪವನ್ನ ತಿರಸ್ಕರಿಸಿದ್ದು, ಹಲವು ಚರ್ಚೆಗಳಿಗೆ ನಾಂದಿಯಾಗಿದೆ. ವಕ್ಫ್ ವಿಚಾರವಾಗಿ ಅನೇಕರು ಆಮೀಷ ಒಡ್ಡಿದ್ದರು. ಅವರಲ್ಲಿ ಕಾಂಗ್ರೆಸ್ಸಿನವರೇ ಹೆಚ್ಚಾಗಿ ಇದ್ದರು, ಎಂದು ಸಿಎಂ ಹೇಳಿಕೆ ವಿರುದ್ಧ ಸ್ಫೋಟಕ ತಿರುವು ಕೊಟ್ಟಿದ್ದರು. ಬೇಕಾದರೆ ಈ ಪ್ರಕರಣವನ್ನ CBI ತನಿಖೆಗೆ ಒಪ್ಪಿಸಲಿ ಎಂದು ಹೇಳಿದ್ದರು.
ಈ ವಿಚಾರವಾಗಿ ಗದಗನ ಹರ್ಲಾಪುರದಲ್ಲಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮಣಿಪ್ಪಾಡಿಯವರು ಹೇಳಿರುವ ಕುರಿತು ವಿಡಿಯೋ ರೆಕಾರ್ಡ್ ನಲ್ಲಿಯೇ ಇದೆ.ಅವರೇ ಪ್ರಧಾನಿ ಹಾಗೂ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಈವಾಗ ಗೊತ್ತಿಲ್ಲ, ಯಾಕೆ ಬದಲಾವಣೆ ಮಾಡಿಕೊಂಡಿದ್ದಾರಂತ ನೋಡುತ್ತೇನೆ. ಅಥವಾ ಬದಲಾವಣೆ ಮಾಡಿಕೊಂಡು ಅವರು ಹೇಳಿಸಿರಬಹುದು. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದ್ದು, ಬೇಕಾದರೆ ಸಿಬಿಐ ಗೆ ವಹಿಸಲಿ ಎಂದು ಸಿಎಂ ಉತ್ತರಿಸಿದರು.