ಮಹಾರಾಷ್ಟ್ರದಲ್ಲಿ ಮತದಾನೋತ್ತರ ಭವಿಷ್ಯವನ್ನೂ ಮೀರಿ ಮಹಾಯುತಿ (ಎನ್‌ಡಿಎ – ಬಿಜೆಪಿ ಮೈತ್ರಿಕೂಟ) ಅಮೋಘ ಗೆಲುವು ಸಾಧಿಸಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಬಿಜೆಪಿ ನಾಯಕರು ಕಣ್ಣಿಟ್ಟಿದ್ದರು. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮುಂಚೆಯೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯ ತಂತ್ರಗಳನ್ನು ಅಳವಡಿಸಿಕೊಂಡಿತ್ತು. ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಬಿಜೆಪಿ ಎಡವಿತ್ತು. ಆ ಸೋಲಿನ ನಂತರ ಎಚ್ಚೆತ್ತುಕೊಂಡ ಬಿಜೆಪಿಯು ಸಂಪೂರ್ಣವಾಗಿ ತನ್ನ ಕಾರ್ಯ ತಂತ್ರವನ್ನೇ ಬದಲಾಯಿಸಿತ್ತು. ಇದು ಸೇರಿದಂತೆ ಹಲವು ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಗೆಲುವು ಕಂಡಿದೆ.
ಮಹಾರಾಷ್ಟ್ರದಲ್ಲಿ ಈಗ ಮಹಾಯುತಿ ಅಂದರೆ ಬಿಜೆಪಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಅಜಿತ್ ಪವಾರ್) ಹಾಗೂ ಶಿವಸೇನಾ (ಏಕನಾಥ್ ಶಿಂಧೆ) ಅಧಿಕಾರದಲ್ಲಿ ಇದೆ. ಈ ಪಕ್ಷಗಳು ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿವೆ. ಈ ಪಕ್ಷಗಳ ನಡುವೆ ಸಣ್ಣಪುಟ್ಟ ಗೊಂದಲಗಳು ಇದ್ದವು. ಆದರೆ, ಈ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿವೆ.