ಗದಗ:ಆಕಾಶಕ್ಕೆ ನಕ್ಷತ್ರಗಳು ಯಾವರೀತಿಯೋ ಹಾಗೆ, ಮಕ್ಕಳೂ ಸಹ ಭೂಮಿಯ ಮೇಲಿನ ನಕ್ಷತ್ರಗಳು ಇದ್ದಂತೆ. ತಮ್ಮಲ್ಲಿರುವ ಜ್ಞಾನದಿಂದ ಸದಾ ಹೊಳೆಯುತ್ತಾರೆ. ಶಿಕ್ಷಕರು ಹಾಗೂ ಪಾಲಕರಾದವರು ಆ ಹೊಳಪನ್ನ ಗುರುತಿಸುವ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ ಪೋತದಾರ ಹೇಳಿದರು.
ನಗರದ ಪ್ರತಿಷ್ಠಿತ ಸಂಸ್ಥೆಯಾದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ವಿನಯ್ ಚಿಕ್ಕಟ್ಟಿ ಹಾಗೂ ಬಿಪಿನ್ ಚಿಕ್ಕಟ್ಟಿ ಶಾಲೆಗಳಲ್ಲಿ ಜರುಗಿದ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಶಸ್ತಿ ಪಡೆದವರು ಸ್ವಲ್ಪ ಹೆಚ್ಚಿನ ಸಮಯ ಅಭ್ಯಾಸ ಮಾಡಿದ್ದಾರೆ. ಪಡೆಯದಿದ್ದವರು ಕಡಿಮೆ ಅಭ್ಯಾಸ ಮಾಡಿರುವುದರಿಂದ ಪ್ರಶಸ್ತಿ ಬಂದಿರುವದಿಲ್ಲ, ಹಾಗಂತ ಯಾರೂ ದಡ್ಡರಲ್ಲ ಎಲ್ಲರೂ ಬುಧ್ಧಿವಂತರೆ.ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಮಯ ಕೊಟ್ಟಾಗ ನಿಮಗೂ ಸಹ ಇಂಥಹ ನೂರಾರು ಪ್ರಶಸ್ತಿಗಳು ನೀವಿದ್ದಲ್ಲಿಯೇ ಹುಡುಕಿಕೊಂಡು ಬರುತ್ತವೆ. ಪ್ರತಿ ವಿದ್ಯಾರ್ಥಿಯಲ್ಲೂ ಏನಾದರೊಂದು, ಯಾವುದೋ ವಿಷಯಕ್ಕೆ ಸಂಬಂಧಪಟ್ಟಂತೆ ವಿಶೇಷವಾದ ಜ್ಞಾನ ಇದ್ದೇ ಇರುತ್ತದೆ. ಆ ಜ್ಞಾನವನ್ನು ಪತ್ತೆ ಹಚ್ಚಿ ಅದಕ್ಕೆ ಮೆರಗನ್ನು ತುಂಬಿ ಜಗತ್ತಿಗೆ ಪ್ರಕಾಶಿಸುವಂತೆ ಮಾಡಬೇಕಾದವರು ಶಿಕ್ಷಕರು ಎಂದರು.
ಬಿದಿರು ಒಮ್ಮೆ ಶಿವನನ್ನು ಕೇಳಿಕೊಂಡಿತಂತೆ, ನನ್ನನ್ನ ಭೂಮಿಯ ಮೇಲೆ ಬೆಳೆಯಲು ಬಿಟ್ಟಿದ್ದೇತಕೆ ಹೂ, ಕಾಯಿ, ಹಣ್ಣು, ಕೊಡುವುದಿರಲಿ ನೆರಳು ಸಹ ಕೊಡುವ ಯೋಗ್ಯತೆಯು ನನಗಿಲ್ಲ, ಯಾತಕ್ಕಾಗಿ ನಾನಿರಬೇಕೆಂದು ಬಹಳ ನೊಂದುಕೊಂಡು ಕೇಳಿದಾಗ, ಶಿವ ಹೇಳಿದ, ಸಹನೆ ತಾಳ್ಮೆಯಿಂದ ಎತ್ತರಕ್ಕೆ ಬೆಳೆ, ಆಗ ನೋಡು ನಿನ್ನ ಮಹಿಮೆ ಎಂದು ಆಶೀರ್ವದಿಸಿದ. ಶಿವನ ಆಜ್ಞೆಯಂತೆ ಬಿದಿರು ಎತ್ತರಕ್ಕೆ ದಪ್ಪನಾಗಿ ಬೆಳೆಯಿತು, ಆಗ ಹಸನು ಮಾಡಲು ಮರವಾಯಿತು, ಕುಟ್ಟಲು ಒನಕೆಯಾಯಿತು, ಹಿರಿಯರಿಗೆ ಊರುಗೋಲಾಯಿತು, ಶ್ರೀ ಕೃಷ್ಣನಿನಗೆ ಕೊಳಲಾಯಿತು. ಅಷ್ಟೇಯಾಕೆ! ಜನಿಸಿದಾಗ ತೊಟ್ಟಿಲು ಕಟ್ಟುವುದರಿಂದ ಸ್ವರ್ಗಸ್ತರಾದಾಗ ಚಟ್ಟ ಕಟ್ಟುವವರೆಗೂ ಬಿದಿರೆ ಬಳಕೆಯಾಗುವಂತಾಯಿತು. ಹಾಗೆಯೇ ನಾವೂ ಸಹ ಸುಮ್ಮನಿರದೇ ಸತತ ಪ್ರಯತ್ನದಿಂದ ನಮಗೆ ಯಾವ ವಿಷಯದ ಕುರಿತು ಜ್ಞಾನವಿದೆಯೋ ಆ ವಿಷಯವನ್ನು ಅಭ್ಯಾಸ ಮಾಡಿದರೆ ಆ ಬಿದಿರಿನಂತೆ, ನಾವೂ ಸಹ ಸಾಧಕರಾಗುತ್ತೇವೆಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಉದ್ಯಮಿ ಪ್ರಕಾಶ ಕುಂದನ್ಮಲ್ ಶಾ ಅವರು ಪ್ರಶಸ್ತಿ ವಿತರಣಾ ಸಮಾರಂಭದ ಕುರಿತು ಮಾತನಾಡಿ, ಪ್ರಶಸ್ತಿ ಪಡೆದ ಮಾತ್ರಕ್ಕೆ ನಮ್ಮ ಕೆಲಸ ಮುಗಿಯತೆಂದಲ್ಲ. ಮತ್ತಷ್ಟು ಹೆಚ್ಚಿನ ಜವಾಬ್ದಾರಿ ನಮ್ಮದಾಗುತ್ತದೆ. ನಾವು ಮಾಡಿದ ಕೆಲಸಕ್ಕೆ ನಮ್ಮನ್ನು ಪ್ರೋತ್ಸಾಹಿಸುವ ಕೆಲಸವನ್ನ ಪ್ರಶಸ್ತಿಗಳು ಮಾಡುತ್ತವೆ. ಹಾಗಂತ ನಮ್ಮ ಗುರಿ ಪ್ರಶಸ್ತಿಗಳತ್ತ ಸೆಳೆಯಬಾರದು. ಬದಲಾಗಿ ನಿರಂತರ ಕೆಲಸ ಹಾಗೂ ಶ್ರಮದತ್ತ ಸಾಗಿದಾಗ, ಪ್ರಶಸ್ತಿಗಳು ತಾವಾಗಿಯೇ ಬೆನ್ನಟ್ಟುತ್ತವೆ ಎಂದು ಹೇಳಿದರು
ಸಂಸ್ಥೆಯ ಅಧ್ಯಕ್ಷರಾದ ಪ್ರೋ ಎಸ್.ವಾಯ್ ಚಿಕ್ಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ,ಮಹೇಶ್ ಪೋತಾದಾರ ಅವರು, ವೃತ್ತಿಯಿಂದ ಉಪನಿರ್ದೇಶಕರಾಗಿ, ಪ್ರವೃತ್ತಿಯಿಂದ ಅತ್ಯುತ್ತಮ ಗಾಯಕರಾಗಿ, ಗಾನಗಂಧರ್ವ ಪ್ರಶಸ್ತಿಯನ್ನು ಪಡೆದಿರುವ ಸಾಧಕರಾಗಿದ್ದಾರೆ. ಕಂಠಪಾಠವಾಗಿ ಐದುನೂರಕ್ಕೂ ಹೆಚ್ಚು ಗೀತೆಗಳನ್ನು ಹಾಡುವಂತ ಪಾಂಡಿತ್ಯವುಳ್ಳವರು. ಅಷ್ಟೇ ಅಲ್ಲ ಅಧಿಕಾರಿಗಳಾಗುವ ಮುನ್ನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತ ಮಕ್ಕಳ ಮನಸನ್ನು ಅಂತರಂಗದಲ್ಲಿ ಅರಿತುಕೊಂಡಂತವರು. “ಬಲ್ಲವನೇ ಬಲ್ಲ, ಬೆಲ್ಲದ ರುಚಿಯ”ಎನ್ನುವಂತೆ ವೃತ್ತಿಯಿಂದ ಅಧಿಕಾರಿಗಳಾಗಿ, ಪ್ರವೃತ್ತಿಯಿಂದ ಗಾಯಕರಾಗಿ ಬೆಲ್ಲದಂತ ರುಚಿಯನ್ನು ನಮಗೆಲ್ಲರಿಗೂ ಹಂಚಲು ಆಗಮಿಸಿದ್ದಾರೆ ಎಂದು ಹೇಳಿದರು.
ಇನ್ನು ವಿಮಲ್ ರೆಸಾರ್ಟನ ಆದರ್ಶ ವ್ಯವಸ್ಥಾಪಕರಾದ ಸುಧಾ ಕೊಪ್ಪದ ಅವರು ಸಹ, ರೆಸಾರ್ಟನ್ನು ಕರ್ನಾಟಕದಲ್ಲಿಯೆ ಅತ್ಯುತ್ತಮವಾದ ಭೋಜನದ ಸ್ವಾದ ಹಾಗೂ ಮನಂರಜನೆದಾಯಕವಾದುದ್ದು ಎಂಬ ಹೆಸರಿನ ಹಿಂದೆ ಅವರ ಸತತ ಪರಿಶ್ರಮವಿದೆ ಎಂದು ತಿಳಿಸಿದರು. ಅಲ್ಲದೇ ಪ್ರಕಾಶ ಕುಂದನ್ಮಲ್ ಶಾ ಅವರು ಹೆಸರಾಂತ ಉದ್ಯಮಿ, ಅವರು ಬಿಜಿನೆಸ್ ಕುರಿತು ಮಾತನಾಡಬಹುದಿತ್ತು, ಆದರೆ ಅವರು ನಮ್ಮೊಂದಿಗೆ ಶಿಕ್ಷಣದ ಕುರಿತು ಮಾತನಾಡುತ್ತಾರೆ, ಪಾದರಸದಂತ ಗುಣದವರು, ಪಾದರಸವನ್ನು ನಾವು ಯಾವುದರಲ್ಲಿ ಹಾಕುತ್ತೇವೋ ಅಲ್ಲಿ ಅದರಂತಯೇ ಆವರಿಸಿಕೊಳ್ಳುತ್ತದೆ. ಹಾಗೆಯೇ ಪ್ರಕಾಶರವರು ತಾವಿರುವ ಸ್ಥಳ, ಸ್ಥಾನವನ್ನು ಅರಿತುಕೊಂಡು ಮಾತನಾಡುವಂತ ಪಾಂಡಿತ್ಯವುಳ್ಳವರು.ಪ್ರಕಾಶ ಕುಂದನ್ಮಲ್ ಶಾ ಅವರ ಮಗನಾದ ಭೂಷಣ ಶಾ, ನಮ್ಮ ವಿದ್ಯಾರ್ಥಿಯಾಗಿದ್ದು, ಗದಗ ಶಿರಹಟ್ಟಿ ರಸ್ತೆಯಲ್ಲಿ ವಿಶೇಷವಾಗಿ, ವಿಭಿನ್ನವಾದ, ಮಕ್ಕಳಿಗೆ ಮನರಂಜನೆ ಕೊಡುವಂತ ವಿಮಲ್ ರೆಸಾರ್ಟ್ ನಿರ್ಮಿಸಿ ಜಿಲ್ಲೆಗೆ ಹೆಸರುವಾಸಿಯಾಗಿದ್ದಾರೆ. ಅವರು ಬೇರೆ ಬೇರೆ ರಾಜ್ಯಗಳಿಗೆ ಸಂಚರಿಸಿ ಅಲ್ಲಿರುವ ವಿಶೇಷತೆಯನ್ನು ನಮ್ಮ ಭಾಗದಲ್ಲಿ ಅಳವಡಿಸುವ ಮೂಲಕ ವಿಶಿಷ್ಠ ಕಾರ್ಯದಲ್ಲಿ ತೊಡಗಿದ್ದಾರೆ.
ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರು ಹೇಳುತ್ತಿದ್ದರು. “ದೇಶ ಸುತ್ತಿ ನೋಡು ಕೋಶ ಓದಿ ನೋಡು”ಅಂತ, ಹೀಗೆ ಹಿರಿಯರು ಹೇಳಿದ ಎರಡೂ ಕಾರ್ಯಗಳನ್ನು ನಮ್ಮ ವಿದ್ಯಾರ್ಥಿ ಪ್ರಸ್ತುತ ಕಾರ್ಯರೂಪಕ್ಕೆ ತಂದಿರುವದು ನಮಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಇದೇ ವೇಳೆ ಪ್ರಕಾಶ ಕುಂದನ್ಮಲ್ ಶಾ, ಉಪನಿರ್ದೇಶಕರಾದ ಮಹೇಶ್ ಪಿ ಪೋತಾದಾರ ಮತ್ತು ವಿಮಲ್ ರೆಸಾರ್ಟನ ವ್ಯವಸ್ಥಾಪಕರಾದ ಸುಧಾ ಕೊಪ್ಪದ ಅವರಿಗೂ ಚಿಕ್ಕಟ್ಟಿ ಸಂಸ್ಥೆಯ ಪರವಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಅತಿಥಿ ಮಹೋದಯರಿಂದ ವಿಜೇತರಾದ ಮಕ್ಕಳಿಗೆ ಮೆಡಲ್ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ವಾ಼ರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭಧ ವೇದಿಕೆಯಲ್ಲಿ ಪ್ರಾಂಶುಪಾಲರಾದ ವಿನಯ್ ಎಸ್ ಚಿಕ್ಕಟ್ಟಿ, ಬಿಸಿಎ ಕಾಲೇಜ್ ಪ್ರಾಂಶುಪಾಲರಾದ ಬಿಪಿನ್ ಎಸ್ ಚಿಕ್ಕಟ್ಟಿ, ಉಪಪ್ರಾಂಶುಪಾಲರಾದ ಶೋಭಾ ಸ್ಥಾವರಮಠ, ಆಡಳಿತಾಧಿಕಾರಿಗಳಾದ ಕಲಾವತಿ ಕೆಂಚರಾಹುತ, ಬಿಪಿನ್ ಚಿಕ್ಕಟ್ಟಿ ಶಾಲೆಯ ಉಪಪ್ರಾಚಾರ್ಯರಾದ ರಿಯಾನ ಮುಲ್ಲಾ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಪ್ರೀಯಾಂಕಾ ಮಾಂತಾ ಪ್ರಾರ್ಥನಾ ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತಾಧಿಕಾರಿಗಳಾದ ಕಲಾವತಿ ಕೆಂಚರಾಹುತರವರು ಗಣ್ಯಮಾನ್ಯರಿಗೆ ಸ್ವಾಗತ ಕೋರಿದರು, ವೇದಿಕೆಯಲ್ಲಿರುವ ಅತಿಥಿ ಮಹೋದಯರೆಲ್ಲರೂ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿನಿಯರಾದ ಅನುಷ್ಕಾ ಹಟ್ಟಿ, ಇಫಾ ತೆಕ್ಕಲಕೋಟಿ, ರಕ್ಷಾ ವಿ ಸೊಪ್ಪಿನ ಹಾಗೂ ನಿವೇದಿತಾ ಜಿ ಶಿರಸಿ ಮಾಡಿಕೊಟ್ಟರು. ವಿಜೇತರಾದವರ ವರದಿಯನ್ನು ಶಿಕ್ಷಕಿಯರಾದ ರೇಖಾ ಹುಗ್ಗಿ, ಶೃತಿ ಧರ್ಮಸಿ, ರಜಿನಾ ಎನ್ ಹಾಗೂ ಕವನಾ ಕೆ ಮತ್ತು ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಪ್ರೀಯಾಂಕಾ ಮಾಂತಾ, ಕುಮಾರಿ ಪ್ರಗತಿ ಮಾಡೊಳ್ಳಿ, ರಜನಿ ಕುರಿ ಹಾಗೂ ಶಿಕ್ಷಕರಾದ ಗಣೇಶ್ ಜಿ ಬಡ್ನಿಯವರು ಓದಿದರು. ಶಿಕ್ಷಕಿಯರಾದ ಸಲೋಮಿ ಎಸ್. ಗುವಲಾ ಹಾಗೂ ಕುಮಾರಿ ಮೇರಿ ಪಾಪಬತ್ತಿಣಿ ನಿರೂಪಿಸಿದರೆ ಶಿಕ್ಷಕರಾದ ರಾಹುಲ್ ಎಮ್. ವಂದಿಸಿದರು.
