ಗದಗ:ಪಾಲಕರಾದವರು ಮಕ್ಕಳಿಗೆ ಸಂಪತ್ತಿನ ಬಗ್ಗೆ ಹೇಳದೇ ಸಂಬಂಧದ ಬಗ್ಗೆ ತಿಳಿಸಿರಿ.ನಿಮ್ಮ ಮಕ್ಕಳಿಗೆ ಹಣ ಗಳಿಸೋದನ್ನ ಹೇಳಿಕೊಡುವದಕ್ಕಿಂತ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿರಿ.ಅಂದಾಗ ಗೌರವ, ಹಣ ಎರಡೂ ನಿಮ್ಮದಾಗುತ್ತವೆ ಎಂದು ಕಪ್ಪತ್ತಗುಡ್ಡದ ನಂದಿವೇರಿಮಠದ ಶ್ರೀ ಶಿವಕುಮಾರ ಸ್ವಾಮಿಜಿ ಹೇಳಿದರು.
ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಲಿಟಲ್ ಮಿಲೇನೀಯಮ್ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸಿ ಪೂಜ್ಯರು ಆಶಿರ್ವಚನ ನೀಡಿದರು.
ತಂದೆ ತಾಯಿಗಳು ಮಕ್ಕಳಿಗೆ ವಿದ್ಯಾ-ಬುದ್ದಿಯ ಜೊತೆಗೆ ದೇಶಾಭಿಮಾನವನ್ನೂ ಕಲಿಸಿರಿ. ದೇಶಾಭಿಮಾನ ಇಲ್ಲದೇ ಇದ್ರೆ ಮಕ್ಕಳು ಪರದೇಶಿ, ಪಾಲಕರು ಸ್ವದೇಶಿಯಂತಾಗುತ್ತಾರೆ.ಮುಂದಿನ ದಿನಮಾನಗಳಲ್ಲಿ ಪಾಲಕರು ಕೊನೆ ಘಳಿಗೆಯಲ್ಲಿದ್ದಾಗ, ವಿದೇಶದಲ್ಲಿರುವ ಮಕ್ಕಳು ಪಾಲಕರ ಮುಖ ನೋಡಲೂ ಬಾರದೇ, ಪೋನ್ ಪೇ ಮೂಲಕ ಹಣ ಕಳಿಸಿ ಸಕಲ ಕಾರ್ಯ ಮುಗಿಸಿ ಬಿಡಿ ಎಂದು ಹೇಳುತ್ತಾರೆ. ವಿದೇಶಕ್ಕೆ ಹೋಗುವುದು ತಪ್ಪಲ್ಲ,ಆದರೆ ಹೆತ್ತವರನ್ನು ನೋಡಿಕೊಳ್ಳದೇ ವಿದೇಶದಲ್ಲಿರುವುದು ತಪ್ಪು ಎಂದು ತಿಳಿಸಿದರು.
ಇನ್ನು ಟಿ.ವಿ ಬಂದಾಗಿನಿಂದ ಪುಸ್ತಕ ಓದುವರ ಸಂಖ್ಯೆ ಕಡಿಮೆಯಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದಂತೆ ಮೈಮೇಲೆ ಹರಿದ ಅಂಗಿಯಿದ್ದರೂ ಪರವಾಗಿಲ್ಲ, ಕೈಯಲ್ಲೊಂದು ಪುಸ್ತಕವಿರಲಿ ಎಂದಿದ್ದಾರೆ. ಹಾಗಾಗಿ ನಾವು ಮೊದಲು ಪುಸ್ತಕ ಹಿಡಿದು ಕುಳಿತರೆ ನಮ್ಮನ್ನು ನೋಡಿ ನಮ್ಮ ಮಕ್ಕಳು ಪುಸ್ತಕ ಹಿಡಿದು ಕುಳಿತುಕೊಳ್ಳುತ್ತಾರೆ. ಮಕ್ಕಳಿಗೆ ಸಂಸ್ಕಾರವನ್ನ ಕಲಿಸದಿದ್ದರೆ ದೊಡ್ಡವರಾದ ಮೇಲೆ ಬಾರ್ ದಾಸ್, ಬೀರ್ ದಾಸರಾಗಿ ತಮಗೂ ಗೌರವ ಇಲ್ಲದಂತಾಗಿ, ಪಾಲಕರ ಗೌರವವನ್ನು ಕಳೆಯುವಂತಾಗುತ್ತಾರೆ. ಹೀಗಾಗಿ ಸಂಸ್ಕೃತಿ, ಸಂಸ್ಕಾರ ಕಲಿಸಿ, ಮಕ್ಕಳನ್ನ ಪ್ರಜ್ಞಾವಂತ ಪ್ರಜೆಗಳನ್ನಾಗಿಸಿ ಎಂದರು.

ಗಿಡಮರಗಳು ನಮಗೆ ದೇವರು ಕೊಟ್ಟ ವರಗಳಾಗಿವೆ. ಅಂತಹ ಗಿಡಮರಗಳನ್ನ ಪ್ರತಿಯೊಬ್ಬರು ಬೆಳೆಸುವಂತಾಗಬೇಕು. ಇಲ್ಲಿರುವ ಗಿಡಮರಗಳನ್ನ ನೋಡಿದರೆ ನಮಗೆ ನಮ್ಮ ಕಪ್ಪತ್ತಗುಡ್ಡದಲ್ಲಿಯೇ ಇದ್ದೇವೆ ಎನಿಸುತ್ತದೆ, ಇಲ್ಲಿನ ವಾತಾವರಣ ನೋಡಿದರೆ ನಾನು ಸಹ ವಿದ್ಯಾರ್ಥಿಯಾಗಿ ಈ ಶಾಲೆಗೆ ಬರಬೇಕೆಂದೆನೆಸುತ್ತದೆ. ಚನ್ನವೀರ ಕಣವಿಯವರು ಗಿಡಗಳೆಂದರೆ ಅವು ಬರಿ ಗಿಡಗಳಲ್ಲ, “ಆ ಗಿಡ, ಈ ಗಿಡ, ಹಾಲ್ಜೇನಿನ ಹೊಂಗೊಡ”ಎಂದು ಹೇಳಿದ್ದಾರೆ. ಗಿಡಮರಗಳು ಮಾನವರಿಗಷ್ಟೇ ಅಲ್ಲದೇ ಮೃಗ-ಖಗ, ಮರ್ಕಟ-ಕುಕ್ಕಟ, ಸಕಲ ಜೀವ ರಾಶಿಗಳಿಗೆ ಆಶ್ರಯಧಾತವಾಗಿವೆ. ಗಿಡಮರಗಳು ಹೇಳುತ್ತವೆ ನಾವು ಬೆಳೆದು ನಾಲ್ಕಾರು ಜನಕ್ಕೆ ಹೂ, ಹಣ್ಣು, ನೆರಳಾಗಿರುತ್ತೇವೆ. ನೀನಾರಿಗಾದೆಯೋ ಎಲೆ ಮಾನವ ಎಂದು ಕೇಳುತ್ತವೆ. ಗಿಡವೆಂಬುದು ಪರಂಪರೆ, ಬೀಜವೆಂಬುದು ಭವಿಷ್ಯ, ಬೀಜವೆಂಬ ಭವಿಷ್ಯ ಬಿತ್ತಿ ಗಿಡವೆಂಬ ಪರಂಪರೆಯನ್ನ ಬೆಳೆಸೋಣ ಎಂದು ಪೂಜ್ಯರು ಆಶೀರ್ವಚನ ನೀಡಿದರು
ನಿವೃತ್ತ ಪ್ರಾಚಾರ್ಯರಾದ ಎಸ್.ವಿ. ಶಿವನಗೌಡ್ರು ಮಾತನಾಡಿ, ಈ ಶಾಲೆಯ ಮಕ್ಕಳ ಸಂಸ್ಕಾರವನ್ನು ಗಮನಿಸಿದಾಗ ವಿದ್ಯೆಗೆ ವಿನಯವೇ ಭೂಷಣ ಎನ್ನುವ ನುಡಿ ನೆನಪಾಯಿತು. ಇಲ್ಲಿನ ಬಯಲು ವಿಜ್ಞಾನ ಪ್ರಯೋಗಾಲಯ ಮಕ್ಕಳಿಗಷ್ಟೇ ಅಲ್ಲದೇ ಹಿರಿಯರು ತಿಳಿದುಕೊಳ್ಳುವಂತಹ ವಿಜ್ಞಾನದ ಹಲವಾರು ಮಾದರಿಗಳು ಇಲ್ಲಿವೆ. ವಿದ್ಯುತ್ ಬಳಸದೇ ನೀರನ್ನು ಮೇಲೆತ್ತುವ ಸಾಧನ ಅತ್ಯದ್ಭುತವಾಗಿದೆ. ವೈಜ್ಞಾನಿಕ ಲೋಕವನ್ನೇ ಇಲ್ಲಿ ಸೃಷ್ಠಿ ಮಾಡಿದ್ದಾರೆ. ವಿದ್ಯಾವಂತರು ವಿನಯವಂತರಾಗಬೇಕು. ವಿನಯವಂತರು ಸುಸಂಕೃತವಂತರಾಬೇಕು. ವಿನಯ ಚಿಕ್ಕಟ್ಟಿ ಶಾಲೆ, ಹೆಸರಿಗೆ ಮಾತ್ರ ವಿನಯವಲ್ಲ, ಪ್ರತಿ ಮಕ್ಕಳಲ್ಲೂ ವಿನಯವನ್ನು ತುಂಬಿದ ಶಾಲೆ ಎಂಬುದು ನನಗರ್ಥವಾಯಿತು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯರಾದ ಐ.ಕೆ.ಕಮ್ಮಾರ್ ಅವರು ಮಾತನಾಡಿ, ಈ ಚಿಕ್ಕಟ್ಟಿ ಕ್ಯಾಂಪಸ್‌ಗೆ ಬಂದಾಕ್ಷಣ ನನಗಾದ ಆಧ್ಯಾತ್ಮಿಕ ಅನುಭವದಿಂದ ಹೇಳುವುದಾದರೆ ಇಲ್ಲಿ ಒಂದು ಧನಾತ್ಮಕವಾದ ಅಗೋಚರ ಶಕ್ತಿ ಇದೆ, ಆ ಶಕ್ತಿ ಪ್ರತಿಯೊಬ್ಬರ ಅಂತರಂಗವನ್ನು ಸೇರುತ್ತೆ.ಆ ಮೂಲಕ ಇಲ್ಲಿ ಓದಿದ ವಿದ್ಯಾರ್ಥಿಗಳಷ್ಟೇ ಅಲ್ಲದೇ ಶಿಕ್ಷಕ, ಶಿಕ್ಷಕಿಯರೂ ಸಹ ಪಂಡಿತರಾಗಿ ಹೊರಹೋಗಿದ್ದಾರೆ. ಮಕ್ಕಳಿಗೆ ಶಿಕ್ಷಣವಷ್ಟೇ ಅಲ್ಲದೇ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೊಳಿಸುವಂತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲು ಕಾರಣಿಕರ್ತರು ಸಂಸ್ಥೆಯ ಸಂಸ್ಥಾಪಕರಾದ ಪ್ರೊ ಎಸ್.ವಾಯ್. ಚಿಕ್ಕಟ್ಟಿಯವರು ಶಿಸ್ತಿನ ಸಿಪಾಯಿ, ಸಮಯ ಪಾಲಕರು ನಮಗೆಲ್ಲಾ ಮಾದರಿಯಾದವರು. ಸತತ ಪರಿಶ್ರಮದ ಫಲದಿಂದ ಚಿಕ್ಕಟ್ಟಿ ಶಾಲೆಯು ಗದಗ ಜಿಲ್ಲೆಯಲ್ಲಿಯೇ ಅತ್ಯುತ್ತಮ ಶಾಲೆಯಾಗಿ ಪ್ರಜ್ವಲಿಸುತ್ತಿದೆ. ಇಂತಹ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳು ಪುಣ್ಯವಂತರು, ವಿದ್ಯಾರ್ಥಿಗಳು ಅಂಕಗಳಿಗಷ್ಟೇ ಸೀಮಿತರಾಗದೇ ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಾ ಸಂಸ್ಕಾರವಂತರಾಗುತ್ತಾರೆ. ಅಂತಹ ದೇಶಿ ಸಂಸ್ಕೃತಿ, ಸಂಸ್ಕಾರ ಕಲಿಸುವ ಕೆಲವೊಂದಿಷ್ಟು ಶಾಲೆಗಳಲ್ಲಿ ಚಿಕ್ಕಟ್ಟಿ ಶಾಲೆಯೂ ಸಹ ಒಂದು ಎಂದು ಹೇಳಿದರು.
ಸಂಸ್ಥಾಪಕರಾದ ಪ್ರೊ ಎಸ್. ವಾಯ್ ಚಿಕ್ಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ದಿವ್ಯ ಸಾನಿಧ್ಯ ವಹಿಸಿಲು ಕಪ್ಪತ್ತಗುಡ್ಡದ ನಂದಿವೇರಿ ಮಠದ ಶ್ರೀ ಶಿವಕುಮಾರ ಶ್ರೀಗಳನ್ನು ಕೇಳಿಕೊಂಡಾಗ ಹರುಷದಿಂದ ಒಪ್ಪಿಕೊಂಡು ಆಗಮಿಸಿದ್ದಾರೆ. ಪೂಜ್ಯ ಶ್ರೀಗಳ ಆಗಮನ ನಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ಮೆರಗು ತಂದಿದೆ ಎಂದು ಹೇಳಿದರು.
ಇದೇ ವೇಳೆ,ಚಿಕ್ಕಟ್ಟಿ ಸಂಸ್ಥೆಯ ಪರವಾಗಿ ನಂದಿವೇರಿ ಶ್ರೀಗಳಿಗೆ ಗೌರವಪೂರ್ವಕ ಸನ್ಮಾನಿಸಲಾಯಿತು. ಹಾಗೂ ನಿವೃತ್ತ ಪ್ರಾಚಾರ್ಯರಾದ ಎಸ್.ವಿ. ಶಿವನಗೌಡ್ರು ಮತ್ತು ಐ.ಕೆ ಕಮ್ಮಾರ್ ಅವರನ್ನ ಸಹ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಮಕ್ಕಳು ವರ್ಣರಂಜಿತವಾದ ಉಡುಗೆ ತೊಟ್ಟು ತಮ್ಮ ತಾಯಂದಿರೊಂದಿಗೆ ರ‍್ಯಾಂಪ್ ವಾಕ್ ಮಾಡಿದರು. ವಿದ್ಯಾರ್ಥಿಗಳ ನೃತ್ಯದ ಜೊತೆಗೆ ತಾಯಂದಿರೂ ಹೆಜ್ಜೆ ಹಾಕಿದರು.

ಬಿಸಿಎ ಪ್ರಾಂಶುಪಾಲರಾದ ಬಿಪಿನ್ ಎಸ್. ಚಿಕ್ಕಟ್ಟಿ, ಉಪ ಪ್ರಾಚಾರ್ಯರಾದ ಶೋಭಾ ಸ್ಥಾವರಮಠ, ಆಡಳಿತಾಧಿಕಾರಿ ಹಾಗೂ ಲಿಟಲ್ ಮಿಲೇನಿಯಮ್ ಕಲಿಕಾಧಿಕಾರಿಗಳಾದ ಕಲಾವತಿ ಕೆಂಚರಾಹುತ ಹಾಗೂ ಬಿಪಿನ್ ಚಿಕ್ಕಟ್ಟಿ ಶಾಲೆಯ ಉಪ ಪ್ರಾಚಾರ್ಯರಾದ ರಿಯಾನ ಮುಲ್ಲಾ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಕೌಸರ್ ಬಾನು ಸ್ವಾಗತಿಸಿದರೆ, ಏಳನೇ ತರಗತಿ ವಿದ್ಯಾರ್ಥಿನಿಯರಾದ ಅನ್ವಿಕಾ ಎಸ್. ಹಟ್ಟಿ ಹಾಗೂ ಅನುಷಾ ಎ. ಅಣ್ಣಿಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯರಾದ ಅಕ್ಷತಾ ಖೋಡೆ ವಂದನಾರ್ಪಣೆಗೈದರು.
