ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ರಾಮೆನಹಳ್ಳಿ ಗ್ರಾಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 68 ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮವನ್ನು ಮೇಣದಬತ್ತಿ ಬೆಳಗಿಸುವ ಮೂಲಕ ಮತ್ತು ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮರಿಯಜ್ಜ ಎಚ್ ರವರು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ದಲಿತ ಸಮುದಾಯವು ಮುಂದೆ ಬರಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.
ನಂತರ ದಲಿತ ಚಳುವಳಿಯ ತಾಲೂಕಾಧ್ಯಕ್ಷರಾದ ಲಕ್ಷ್ಮಣ ತಗಡಿನಮನಿ ಅವರು ಮಾತನಾಡಿ, ಮಹಾಪರಿನಿರ್ವಾಣ ದಿನ ಎಂದರೆ ನಮ್ಮೆಲ್ಲರಿಗೂ ತುಂಬಾ ದುಃಖದ ಸಂಗತಿ. ಯಾಕೆಂದರೆ ಈ ದೇಶದ ಪ್ರತಿಯೊಬ್ಬರಿಗೂ ಸಮಾನತೆಯ ಮೀಸಲಾತಿಯನ್ನು ನೀಡಿ ಅಮೂಲ್ಯ ರತ್ನವಾದ ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ .ಆದರೆ ಅವರು ನೀಡಿರುವ ಸಂವಿಧಾನ ಒಂದು ಜಾತಿ ಜನಾಂಗಕ್ಕೆ ಸೀಮಿತವಾಗುವುದಲ್ಲ.ಪ್ರತಿಯೊಬ್ಬರು ಸಂವಿಧಾನದ ಅಡಿಯಲ್ಲಿ ಶಿಕ್ಷಣ ರಾಜಕೀಯ ಸಾಮಾಜಿಕ ಸಮಾನತೆ ಮೂಲಕ ಬದುಕು ಕಟ್ಟಿಕೊಳ್ಳೋಣ ಎಂದರು.
ದಲಿತ ಸಂಘಟನೆಯ ಹೋರಾಟಗಾರರಾದ ಎಚ್ ಡಿ ಪೂಜಾರ್ ಮಾತನಾಡಿ,ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಇಡೀ ಜಗತ್ತಿನಲ್ಲಿ ಮೆಚ್ಚುಗೆಯ ಸಂವಿಧಾನವಾಗಿದೆ.ಹುಲಿ ಹಾಲು ಕುಡಿದವರು ಗರ್ಜಿಸಲೇಬೇಕು ಹಾಗೆ ಶಿಕ್ಷಣ ಕಲಿತು ನಮ್ಮ ಮಕ್ಕಳನ್ನ ಗರ್ಜಿಸುವಂತೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಸಹದೇವಪ್ಪ ಡಂಬಳ, ಬಸವರಾಜ ತಿಗರಿ, ದೇವಕ್ಕ ದಂಡೀನ್, ಯಲ್ಲಪ್ಪ ಸಂಗಟಿ, ಕೋಟೆಪ್ಪ ಗುಡಿ, ನೀಲಪ್ಪ ಹರಿಜನ, ಮೈಲಾರಪ್ಪ ಪೂಜಾರ, ಅಶೋಕ ಕೋಳಿ, ಮಂಜುನಾಥ ತಳಗೇರಿ, ಕರಬಸಪ್ಪ ಹರಿಜನ್, ಹುಚ್ಚಪ್ಪ ಹಾರೋಗೇರಿ, ಮರಿಯಜ್ಜ ಹರಿಜನ್ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.