ಗದಗ: ಸಂಸ್ಕಾರ, ಸಂಸ್ಕೃತಿ ಧರ್ಮಾಚರಣೆಗಳು ಉಳಿದು ಬೆಳೆಯಬೇಕಾದರೆ ಭಕ್ತರ ಪಾತ್ರ ಬಹುಮುಖ್ಯವಾದುದು.ಭಕ್ತರ ಭಕ್ತಿ ಮತ್ತು ದೈವ ಶಕ್ತಿ ಇದ್ದಲ್ಲಿ ಎಂತಹ ಕಾರ್ಯಗಳನ್ನು ಸಾಧಿಸಬಹುದು ಎಂಬುದಕ್ಕೆ ಅಬ್ಬಿಗೇರಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅ. ೩ ರಿಂದ ಅ.೧೨ ರ ವರೆಗೆ ನಡೆದ ಶ್ರೀಮದ್ ರಂಭಾಪೂರಿ ಜಗದುರುಗಳವರ ದಸರಾ ಧರ್ಮ ಸಮ್ಮೇಳ ಸಾಕ್ಷಿ ಎಂದು ಸಿದ್ದರಬೆಟ್ಟದ-ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಹೊಸ ಹಿರೇಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಸರಾ ಧರ್ಮ ಸಮ್ಮೇಳದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ನಡೆದುಕೊಂಡು ಬಂದಿದ್ದ ದಸರಾ ಧರ್ಮ ಸಮ್ಮೇಳನವನ್ನು ಅಬ್ಬಿಗೇರಿಯಂತಹ ಗ್ರಾಮೀಣ ಪ್ರದೇಶದಲ್ಲಿ ಹೇಗೆ ಮಾಡುತ್ತಾರೆ ಎಂದು ಭಕ್ತರಲ್ಲಿ ಆತಂಕವಿತ್ತು. ಆದರೆ, ಭಕ್ತರ ಭಕ್ತಿಯ ಮುಂದೆ ಯಾವುದು ಅಸಾಧ್ಯ ಎನ್ನುವಂತೆ ಎಲ್ಲ ಧರ್ಮ ಸಮ್ಮೇಳಕ್ಕಿಂತಲೂ ಒಂದು ಹೆಜ್ಜೆ ಮುಂದು ಎನ್ನುವಂತೆ ಧರ್ಮ ಸಮ್ಮೇಳನ ಜರುಗಿದೆ. ಲಿಂ. ಸೋಮಶೇಖರ ಶಿವಾಚಾರ್ಯರರ ಸತ್ ಸಂಕಲ್ಪದಂತೆ ದಸರಾ ದರ್ಬಾರ ಜರುಗಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಧರ್ಮ ಸಮ್ಮೇಳನದ ಸವಿನೆನಪಿಗಾಗಿ ಟ್ರಸ್ಟ್ ಸ್ಥಾಪಿಸಿ ಅದಕ್ಕೆ ಎರಡು ಕೋಟಿ ರೂ.ಗಳ ಠೇವಣಿಯನ್ನು ಇಟ್ಟು ಅದರ ಬಡ್ಡಿ ಹಣದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.
ಸಮ್ಮುಖ ವಹಿಸಿದ್ದ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬುದಕ್ಕೆ ಅಬ್ಬಿಗೇರಿಯಲ್ಲಿ ನಡೆದ ದಸರಾ ದರ್ಬಾರ್ ಸಾಕ್ಷಿಯಾಗಿದೆ. ದಾನಿಗಳಿದ್ದಾಗ ಮಾತ್ರ ಪುಣ್ಯ ಕಾರ್ಯಗಳು ನಡೆಯಲು ಸಾದ್ಯ. ಪುಣ್ಯ ಕಾರ್ಯಗಳು ನಡೆದುಕೊಂಡು ಬಂದಾಗ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸಾಧ್ಯ. ಮಠ ಮಂದಿರಗಳನ್ನು ಬೆಳೆಸುವ ಕಾರ್ಯವಾಗಬೇಕು. ಮಠ ಮಂದಿರಗಳಲ್ಲಿ ನಿರಂತರವಾಗಿ ಧರ್ಮದ ಕಾರ್ಯಗಳು ನಡೆದುಕೊಂಡು ಬಂದಾಗ ಮಾತ್ರ ಜನರಲ್ಲಿ ಧಾರ್ಮಿಕತೆ ಬೆಳೆಯುತ್ತದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅಬ್ಬಿಗೇರಿಯ ದಸರಾ ದಸರಾ ದರ್ಬಾರ ಸಾಕ್ಷಿಯಾಗಿದೆ. ಸರ್ವ ಜಾತಿ ಜನಾಂಗದವರು ಧರ್ಮ ಸಮ್ಮೇಳನಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಸಮ್ಮೇಳನ ಯಶಸ್ವಿಯಾಗಲು ಸಾಧ್ಯವಾಯಿತು. ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಅತಃಕರಣದ ಆಶೀರ್ವಾದದ ಫಲದಿಂದ ಧರ್ಮ ಸಮ್ಮೇಳನ ಯಶಸ್ವಿಯಾಗಿದೆ ಎಂದರು.
ದಸರಾ ದರ್ಬಾರ್ ಯಶಸ್ವಿಗೆ ಶ್ರಮಿಸಿದ ಭಕ್ತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಿವಣ್ಣ ಪಲ್ಲೆದ, ಚಂಬಣ್ಣ ಚವಡಿ, ಗ್ರಾ. ಪಂ ಅಧ್ಯಕ್ಷ ನೀಲಪ್ಪ ದ್ವಾಸಲ, ಎಂ.ವಿ. ಹಿರೆವಡೆಯರ, ಆರ್.ಜಿ. ಪಾಟೀಲ, ಎಸ್.ವಿ. ರಾಟಿಮನಿ, ಡಾ. ಆರ್.ಕೆ.ಗಚ್ಚಿನಮಠ, ಸಿ.ಕೆ. ಮಾಳಶೆಟ್ಟಿ, ಬಿ.ಜಿ.ವೀರಾಪೂರ, ಕುಮಾರಸ್ವಾಮಿ ಕೋರಧಾನ್ಯಮಠ,ಸಿ.ವಿ. ಹಿರೇಮಠ, ಸಿ.ಬಿ.ಶಿಸ್ತಗಾರ, ಮಲ್ಲಿಕಾರ್ಜುನ ಹರ್ಲಾಪೂರ,ಬಾಬುಗೌಡ ಪಾಟೀಲ, ಅಮರೇಶ ಹಿರೇಮಠ, ಮಂಜುನಾಥ ಅಂಗಡಿ, ಬಸವರಾಜ ಪಲ್ಲೆದ, ವಿನಾಯಕ ಜೋಶಿ, ರವಿ ಯತ್ನಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು. ಅಂದಪ್ಪ ವೀರಾಪೂರ ನಿರ್ವಹಿಸಿದರು.