ಗದಗ: ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾ (ರಿ) ಗದಗ, ಕರ್ನಾಟಕದ ವತಿಯಿಂದ ಸಮಾನತೆ ಮತ್ತು ಮಾನವತೆಯ ಸಂದೇಶ ಸಾರುವ ಉದ್ದೇಶದಿಂದ ಸಮಾನತೆ ರಥಯಾತ್ರೆ ಮತ್ತು ಸಮಾನತೆ ಬುತ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಮಾರ್ಚ್ 30 ರಂದು ಮಧ್ಯಾಹ್ನ 2 ಗಂಟೆಗೆ ಗದಗ ನಗರದಲ್ಲಿರುವ ಅನಿಲ್ ಮೆಣಸಿನಕಾಯಿ ಅವರ ನಿವಾಸದ ಹತ್ತಿರ ನಡೆಯಲಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯೊಂದಿಗೆ ದೇಶದ ಬಹುಸಂಖ್ಯಾತ ಹಿಂದೂ ಸಮುದಾಯದ ಬೇಡಿಕೆ ಈಡೇರುವಂತಾಗಿದೆ. ಇದನ್ನೇ ಮೆಲುಕು ಹಾಕುತ್ತಾ ಮಹಾನ್ ಮಾನವತಾವಾದಿಗಳು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ವಿಶ್ವಗುರು ಬಸವಣ್ಣನವರು ಸೇರಿದಂತೆ ಹಲವಾರು ಮಹಾಪುರುಷರು ಸಮಾನತೆಯ ಮಹತ್ವದ ಬಗ್ಗೆ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಆದರೂ ಅಸಮಾನತೆ ಇನ್ನೂ ಮುಂದುವರಿದಿರುವ ಹಿನ್ನಲೆಯಲ್ಲಿ, ಸಮಾನತೆ ಮಂದಿರ ನಿರ್ಮಾಣದ ಸಂಕಲ್ಪವನ್ನು ಮಹಾಸಭಾ ತೆಗೆದುಕೊಂಡಿದೆ.

ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14 ರಿಂದ ಬಸವ ಜಯಂತಿವರೆಗೆ ಈ ರಥಯಾತ್ರೆ ಗದಗ ಜಿಲ್ಲೆಯಾದ್ಯಂತ ಸಂಚರಿಸಲಿದೆ. ರಾಮ, ಭೀಮ, ಬುದ್ಧ, ಬಸವ, ಕನಕದಾಸರು, ವಾಲ್ಮೀಕಿ, ಸಂತ ಶರೀಫರು ಮುಂತಾದ ಮಹನೀಯರ ತತ್ವಗಳು ಮತ್ತು ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಈ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತದೆ.
ಸಮಾನತೆ ಹಾಗೂ ಸಮಾನ ಹಕ್ಕುಗಳ ಪರ ನಿಲ್ಲುವ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಹೀಗಾಗಿ ಈ ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾ ಸದಸ್ಯ ಪರಮೇಶ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.